ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಇದರ ವಾರ್ಷಿಕ ಭಜನಾ ಮಹೋತ್ಸವ ಮತ್ತು ಯಕ್ಷ ಸನ್ಮಾನ ಕಾರ್ಯಕ್ರಮ

ಶೇರ್ ಮಾಡಿ

ಬಲ್ಯ: ಶ್ರೀ ವಿನಾಯಕ ಭಜನಾ ಮಂಡಳಿ(ರಿ) ರಾಮನಗರ ಇದರ ವಾರ್ಷಿಕ ಭಜನಾ ಮಹೋತ್ಸವ ಸಾರ್ವಜನಿಕ ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ, ಅಶ್ವತ್ಥ ಪೂಜೆ, ಗಣ ಹೋಮ ದುರ್ಗಾಪೂಜೆ ಮತ್ತು ದಿವಂಗತ ಸುಪ್ರಸನ್ನ ಶಗ್ರಿತ್ತಾಯ ಸ್ಮರಣಾರ್ಥ ಯಕ್ಷ ಸನ್ಮಾನ ಕಾರ್ಯಕ್ರಮ ನಡೆಯಿತು.

ದೋಂತಿಲ್ಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ನೂಜಿನ್ನಾಯ ಮತ್ತು ಶ್ರೀ ಶಾಸ್ಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನೆರವೇರಿತು.

ಪ್ರಾತಕಾಲ ಸೂರ್ಯೋದಯಕ್ಕೆ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಆಸುಪಾಸಿನ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ರಾತ್ರಿ 8.30 ರವರೆಗೆ ನಡೆಯಿತು. ಸಂಜೆ ಸತ್ಯನಾರಾಯಣ ಪೂಜೆ, ದುರ್ಗಾ ಪೂಜೆ ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ನಂತರ ಯಕ್ಷಗಾನದ ಅಪ್ರತಿಮ ಚೆಂಡವಾದ ದಿವಂಗತ ಸುಪ್ರಸನ್ನ ಶಗ್ರಿತ್ತಾಯ ರವರ ಸ್ಮರಣಾರ್ಥ ಯಕ್ಷ ಸನ್ಮಾನ ಕಾರ್ಯಕ್ರಮ ನೆರವೇರಿತು. ಯಕ್ಷ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ್ ರಾಮನಗರ ವಹಿಸಿದ್ದರು. ಶ್ರೀ ಬಾಲಸುಬ್ರಮಣ್ಯ ಯಕ್ಷಗಾನ ಮಂಡಳಿ ಮಕ್ಕಳ ಮೇಳದ ಪ್ರಧಾನ ಕಲಾವಿದರಾಗಿ 25 ವರ್ಷಗಳ ಹಿಂದೆ ವೇಷಗಾರಿಕೆ ಮತ್ತು ಅರ್ಥಧಾರಿಯಾಗಿ ದುಡಿದು, ಶ್ರೀವಿನಾಯಕ ಯಕ್ಷಗಾನ ಮಂಡಳಿ ರಾಮನಗರದಲ್ಲಿ ತಾಳಮದ್ದಳೆಯ ಅರ್ಥಧಾರಿಯಾಗಿ, ಅಧ್ಯಕ್ಷನಾಗಿ, ಗೌರವ ಅಧ್ಯಕ್ಷರಾಗಿ ದುಡಿದು ಕಲಾಸೇವೆ ಮಾಡುತ್ತಾ ಇರುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆಯವರನ್ನು ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರವರು ಗಣ್ಯರ ಉಪಸ್ಥಿತಿಯಲ್ಲಿ ದಿವಂಗತ ಸುಪ್ರಸನ್ನ ಶಗ್ರಿತ್ತಾಯ ಸ್ಮಾರಕ ಯಕ್ಷ ಸನ್ಮಾನವನ್ನು ಮಾಡಿದರು. ಬಳಿಕ ಮಾತನಾಡಿದ ಶಂಕರಿ ತಾಯರವರು ದಿವಂಗತ ಸುಪ್ರಸನ್ನ ಶಗ್ರಿತ್ತಾಯ ಅಪ್ರತಿಮ ಚೆಂಡ ವಾದಕನಾಗಿದ್ದ ಮುಂದಿನ ದಿನಗಳಲ್ಲಿ ದೊಡ್ಡ ಕಲಾವಿದನಾಗುವ ಎಲ್ಲಾ ಅರ್ಹತೆಗಳು ಅವನಿಗೆ ಒಲಿದಿದ್ದವು ಆದರೆ ವಿಧಿಯ ಲೀಲೆಯಿಂದಾಗಿ ಅವನನ್ನು ಕಳೆದುಕೊಳ್ಳುವ ದುರ್ಘಟನೆ ನಮ್ಮ ಜೀವನದಲ್ಲಿ, ಅವನ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ, ಅವನ ನೆನಪಿನಲ್ಲಿ ನನ್ನ ಶಿಷ್ಯ ನನ್ನ ಸಾರಥ್ಯದ ಆಗಿನ ಮಕ್ಕಳ ಮೇಳದ ಪ್ರಧಾನ ಕಲಾವಿದ ಈಗಲೂ ಕಲಾವಿದರಾಗಿ ದುಡಿಯುತ್ತಿರುವ ಗಂಗಾಧರ ಶೆಟ್ಟಿ ಹೊಸಮನೆ ಯವರನ್ನು ಸನ್ಮಾನಿಸುತ್ತಿರುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಅತೀವ ಸಂತಸವಾಗಿದೆ ದೇವರು ಅವರಿಗೆ ದೀರ್ಘಾಯುಷ್ಯ, ಸಕಲ ಸೌಭಾಗ್ಯಗಳನ್ನು ನೀಡಲಿ ಎಂದು ಹರಸಿದರು.

ಸಂದರ್ಭದಲ್ಲಿ ಶಗ್ರಿತ್ತಾಯ ರವರು 10,000 ದೇಣಿಗೆಯನ್ನು ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಜಯರಾಮಗೌಡ ಮತ್ತು ಕಾರ್ಯದರ್ಶಿ ಕಿರಣ್ ರವರಿಗೆ ಹಸ್ತಾಂತರಿಸಿದರು. ಪ್ರತಿ ವರ್ಷ ದಿವಂಗತ ಸುಪ್ರಸನ್ನ ಶಗ್ರಿತ್ತಾಯ ರವರ ಸ್ಮರಣಾರ್ಥ ಒಬ್ಬ ಕಲಾವಿದನನ್ನು ಗುರುತಿಸಿ ಯಕ್ಷ ಸನ್ಮಾನ ಮಾಡಬೇಕೆಂದು ವಿನಂತಿಸಿದರು. ಅದರ ಸಂಪೂರ್ಣ ಖರ್ಚನ್ನು ಸ್ವತಃ ತಾನು ಭರಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನಿತರ ಬಗ್ಗೆ ಮಾತನಾಡಿದ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ರವರು ಗಂಗಾಧರ ಶೆಟ್ಟಿ ಹೊಸಮನೆ ನನ್ನ ಮತ್ತು ನನ್ನ ಗುರುಗಳ ಶಿಷ್ಯನಾಗಿದ್ದಾರೆ. ಸಮಾಜ ಸೇವೆ, ಯಕ್ಷಗಾನ, ನಾಟಕ, ರಾಜಕೀಯ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡಿ ಬಹುಮುಖ ಪ್ರತಿಭಾನ್ವಿತನಾಗಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ನಮ್ಮೂರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಕೀರ್ತಿಯನ್ನು ತಂದಿದ್ದಾರೆ. ಈ ಸಂದರ್ಭದಲ್ಲಿ ದಿವಂಗತ ಸುಪ್ರಸನ್ನ ಶಗ್ರಿತ್ತಾಯ ಸ್ಮಾರಕ ಯಕ್ಷ ಸನ್ಮಾನ ಪಡೆಯುತ್ತಿರುವ ಅವರಿಗೆ ಅಭಿನಂದನೆಗಳು ಎಂದರು. ದಿವಂಗತ ಸುಪ್ರಸನ್ನ ಶಗ್ರಿತ್ತಾಯ ರವರ ಹೆಸರು ಕಲಾ ಕ್ಷೇತ್ರದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕದಂಬ ಕೌಶಿಗೆ ಯಕ್ಷಗಾನದ ಪ್ರಾಯೋಜಕರಾದ ದಿವಂಗತ ಕಾವೇರಿ ಶೀನಪ್ಪಗೌಡ ಪಾದೆಮನೆ ಇವರ ಪುತ್ರಿ ಮಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ಯಶೋಧರ ಅವರನ್ನು, ಕಡಬ ತಾಲೂಕಿನ ಸಾವಿರಾರು ಮಕ್ಕಳಿಗೆ ಉಚಿತ ಭಜನಾ ತರಬೇತಿ ನೀಡುತ್ತಿರುವ ಹರೀಶ್ ಮತ್ತು ಯಕ್ಷ ಕಲಾವಿದ ಶ್ರೀಕುಮಾರ್ ಮಾಲೆಮಾರ್ ರವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶ್ರೀ ಜಯರಾಮ್ ಗೌಡ ನಲ್ಗೊತ್ತು, ಹಿರಿಯ ಯಕ್ಷಗಾನ ಕಲಾವಿದ ವಾಸಪ್ಪಗೌಡ ನಾಲ್ಗೊತ್ತು, ಖ್ಯಾತ ಯಕ್ಷಗಾನ ಚೆಂಡ ವಾದಕ ಪತ್ರಿಕೋದ್ಯಮಿ ಸುಬ್ರಹ್ಮಣ್ಯ ಶಗ್ರಿತ್ತಾಯ, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರದ ಕಾರ್ಯದರ್ಶಿ ರಾಧಾಕೃಷ್ಣ ಗೌಡ, ವಿನಾಯಕ ಭಜನಾ ಮಂಡಳಿ ಪದಾಧಿಕಾರಿಗಳು, ಯಕ್ಷಗಾನ ಮಂಡಳಿಯ ಸದಸ್ಯರು ಮತ್ತು ಗೋಪಾಲಕೃಷ್ಣ ಶಗ್ರಿತ್ತಾಯ ರವರ ಕುಟುಂಬಸ್ಥರು ಭಾಗವಹಿಸಿದ್ದರು.
ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಕಾರ್ಯದರ್ಶಿ ಕಿರಣ್ ಸ್ವಾಗತಿಸಿದರು. ಜಯರಾಮ ಗೌಡ ನಾಲ್ಗೊತ್ತು ವಂದಿಸಿದರು, ಶ್ರೀ ವಿನಾಯಕ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಅಮ್ಮಿ ಗೌಡ ನಲ್ಗೊತ್ತು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕದಂಬ ಕೌಶಿಕೆ ಯಕ್ಷಗಾನ ಬಯಲಾಟ ಸೇವಾರ್ಥವಾಗಿ ನಡೆಯಿತು.

Leave a Reply

error: Content is protected !!