ಸಂಕಷ್ದ ಕಾಲದಲ್ಲೂ ಸರಕಾರ ಕಾರ್ಮಿಕರ ಹಿತಕಾಯುವಲ್ಲಿ ಯಶಸ್ವಿಯಾಗಿದೆ: ಸಚಿವ ಅಂಗಾರ

ಶೇರ್ ಮಾಡಿ

ಕಡಬ: ಕೋರೊನಾ, ಪ್ರಕೃತಿ ವಿಕೋಪದಂತಹ ಸಂಕಷ್ಟ ಕಾಲದಲ್ಲೂ ರಾಜ್ಯದ ಕಾರ್ಮಿಕ ವರ್ಗಕ್ಕೆ ಸವಲತ್ತುಗಳನ್ನು ಸಮರ್ಪಕವಾಗಿ ನೀಡಿ ಕಾರ್ಮಿಕರ ಹಿತಕಾಯುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಾಗಿದೆ ಎಂದು ಸಚಿವ ಎಸ್.ಅಂಗಾರ ಹೇಳಿದರು.
ಅವರು ಬುಧವಾರ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಸಭಾ ಭವನದಲ್ಲಿ ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಬಗೆಯ ಟೂಲ್ ಕಿಟ್ ವಿತರಣೆ ಹಾಗೂ ವಿವಿಧ ಸೌಲಭ್ಯಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಿಟ್ ವಿತರಿಸಿ ಮಾತನಾಡಿದರು. ಮುಗ್ದ ಕಾರ್ಮಿಕರನ್ನು ಕೆಲವು ಸಂಘಟನೆಗಳು ಶೋಷಣೆ ಮಾಡುವ ಕಾರ್ಯ ನಡೆಯುತ್ತಿತ್ತು, ಈಗಲೂ ಕೆಲವೆಡೆ ನಡೆಯುತ್ತಿದೆ, ಇದೀಗ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿದೆ. ಕಾರ್ಮಿಕರು ತಮ್ಮ ಸವಲತುಗಳನ್ನು ಪಡೆಯಲು ಯಾವುದೇ ಕಮಿಷನ್ ಕೊಡುವ ಅವಶ್ಯಕತೆಯಿಲ್ಲ. ನಮ್ಮ ಸರಕಾರ ಅಧಿಕಾರದ ಅವಧಿಯಲ್ಲಿ ರಾಜ್ಯ ಸಂಕಷ್ಟದಲ್ಲಿದ್ದರೂ ಕಾರ್ಮಿಕರಿಗ ಹತ್ತು ಹಲವು ಸೌಲಭ್ಯಗಳನ್ನು ನೀಡಿ ಅವರ ಕುಟುಂಬದ ಪರ ನಿಂತಿದೆ, ಕಾರ್ಮಿಕ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ಪಡೆಯಲು ಮಾಹಿತಿ ಪಡೆದುಕೊಳ್ಳಬೇಕು, ಕಾರ್ಮಿಕ ಕಾರ್ಡ್ ಹೊಂದಿರುವವರು ಮರು ನೋಂದಾವಣೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಸರಕಾರದ ಸೌಲಭ್ಯ ದೊರೆಯುವುದಿಲ್ಲ. ಯಾವುದೇ ಕಾರಣಕ್ಕೂ ಸವಲತ್ತು ಪಡೆಯುವುದಕ್ಕೋಸ್ಕರ ಅರ್ಹತೆ ಇಲ್ಲದಿದ್ದರೂ ಕಾರ್ಡ್ ಮಾಡಿಕೊಳ್ಳಬಾರದು, ಇದರಿಂದಾಗುವ ತೊಂದರೆಯನ್ನು ಅನುಭವಿಸಬೇಕಾದೀತು ಎಂದು ಸಚಿವರು ಎಚ್ಚರಿಸಿದರು.

ವೇದಿಕೆಯಲ್ಲಿ ಕಡಬ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಚಿವ ಅಂಗಾರ ಅವರನ್ನು ಕಡಬ ತಾಲೂಕು ಭಾರತೀಯ ಮಜ್ದೂರು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಫುಡ್ ಕಿಟ್, ಸುರಕ್ಷಾಕಿಟ್, ಇಮ್ಯುನಿಟಿ ಬೂಸ್ಟ್ಕಿಟ್, ಮೆಸನ್ ಕಿಟ್, ಇಲೆಕ್ಟ್ರಿಕಲ್ ಕಿಟ್, ಪೈಂಟಂಗ್ ಕಿಟ್, ಬಾರ್‌ಬೆಂಡಂಗ್ ಕಿಟ್, ಕಾರ್ಪೆಂಟ್ ಕಿಟ್, ಪ್ಲಂಬರ್ ಕಿಟ್, ಬಸ್‌ಪಾಸ್, ನ್ಯೂಟ್ರಿಷಿಯನ್ ಕಿಟ್, ಸ್ಕೂಲ್ ಕಿಟ್ ಹೀಗೆ ಹನ್ನೆರಡು ಬಗೆಯ 12,224 ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಗಣಪತಿ ಹೆಗ್ಡೆ ಪ್ರಸ್ತಾವನೆಗೈದು ಸ್ವಾಗತಿಸಿದರು.ಕಡಬ ತಾಲೂಕು ಭಾರತೀಯ ಮಜ್ದೂರು ಸಂಘದ ಸಂಘಟನಾ ಕಾರ್ಯದರ್ಶಿ ಉದಯ ಪೂವಳ ವಂದಿಸಿದರು. ಕಡಬ ತಾಲೂಕು ಕಾರ್ಯದರ್ಶಿ ಜನಾರ್ಧನ ಗೌಡ ಆರಿಗ ಬಲ್ಯ ಹಾಗೂ ಅಧ್ಯಕ್ಷ ಚಂದ್ರಶೇಖರ ಮರ್ಧಾಳ ಕಾರ್ಯಕ್ರಮ ನಿರೂಪಿಸಿದರು.

ನಾನು ಎರಡು ರೂ ಕೂಲಿಗೆ ಗುಂಡಿ ತೋಡಿದ್ದೆ:. ಸಚಿವ ಅಂಗಾರ
ಶಾಸಕನಾಗುವ ಮುನ್ನ ನಾನು ಕೂಡಾ ಕೂಲಿಕಾರ್ಮಿಕನಾಗಿದ್ದೆ, ಎಲ್ಲಾ ರೀತಿಯ ಕೂಲಿ ಕೆಲಸ ಮಾಡುತಿದ್ದೆ. ಆಗ ನಮಗೆ ದೊರೆಯುತಿದ್ದ ಸಂಬಳ ಒಂದು ಅಡಕೆ ಗುಂಡಿಗೆ ಕೇವಲ ಎರಡು ರೂ, ಒಂದು ಅಡಕೆ ಗುಂಡಿ ತೋಡಬೇಕಾದರೆ ಕರಾರುವಕ್ಕಾಗಿರಬೇಕು, ಈಗ ಅಷ್ಟೆಲ್ಲಾ ಪಕ್ಕ ಕೆಲಸಗಳಿಲ್ಲದಿದ್ದರೂ ನಡೆಯುತ್ತದೆ. ಆಗ ನಮಗೆ ಯಾವುದೇ ಸವಲತ್ತುಗಳು ಸರಕಾರದಿಂದ ದೊರೆಯುತ್ತಿರಲಿಲ್ಲ. ಆದರೂ ನಾವು ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದೆವು ಎಂದು ಹೇಳಿದ ಸಚಿವರು ನಾವು ಈಗ ಬಡತನದ ಬಗ್ಗೆ ಮಾತನಾಡಬಹುದು, ಆದರೆ ನಾನು ಸ್ವತಃ ಅದನ್ನು ಅನುಭವಿಸಿದವನು, ಆ ಸಂದರ್ಭದಲ್ಲಿ ಗಂಜಿಗೆ ಗತಿಯಿರಲಿಲ್ಲ, ಅಂತಹ ಸಮಯದಲ್ಲಿ ನಾನು ಕೂಲಿ ಕಾರ್ಮಿಕನಾಗಿದ್ದೆ, ಬಡತನದ ಕಾರಣದಿಂದಾಗಿ ಕೂಲಿ ಕೆಲಸಕ್ಕೆ ಹೋಗಿ ಶಾಲಾ ಕಲಿಕೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು ಎಂದು ತನ್ನ ಕಷ್ಟದ ದಿನಗಳನ್ನು ಸಚಿವರು ನೆನೆದರು. ಈಗ ನಮಗೆ ಎಲ್ಲಾ ರೀತಿಯ ಅನುಕೂಲತೆಗಳಿವೆ, ಸರಕಾರದ ಸವಲತ್ತುಗಳಿವೆ ಅದನ್ನು ನಾವು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

Leave a Reply

error: Content is protected !!