ಉಜಿರೆ ಎಸ್‌ಡಿಎಂ ಕಾಲೇಜು: ನೌಕಾ ವಿಭಾಗದ 6 ಕೆಡೆಟ್‌ಗಳಿಗೆ ಚಿನ್ನದ ಪದಕ

ಶೇರ್ ಮಾಡಿ

ಬೆಳ್ತಂಗಡಿ: ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ನೌಕಾ ವಿಭಾಗದ 6 ಕೆಡೆಟ್‌ಗಳು ಶಿಪ್‌ ಮಾಡೆಲಿಂಗ್‌ ವಿಭಾಗದಲ್ಲಿ ಬಂಗಾರದ ಪದಕ ಗಳಿಸಿದ್ದಾರೆ.

ದೇಶದ 17 ಡೈರೆಕ್ಟರೇಟ್‌ನವರು ಸಿದ್ಧಪಡಿಸಿ ಪರೀಕ್ಷೆಗೊಳಪಡಿಸಿದ ಪವರ್‌ ಮಾಡೆಲ್‌ ವಿಭಾಗದಲ್ಲಿ ಪಿಒ ಕೆಡೆಟ್‌ಗಳಾದ ಶ್ರೀರಾಮ ಮರಾಠೆ ಮತ್ತು ಅನನ್ಯಾ ಕೆ.ಪಿ. ಸಿದ್ಧಪಡಿಸಿದ ಮಾಡೆಲ್‌ ಅತ್ಯುತ್ತಮ ಎಂದು ಪರಿಗಣಿಸಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದೆ.
ವಿಐಪಿ ಮಾಡೆಲ್‌ನಲ್ಲಿ ಖುಶಿ ಎಂ., ರಾಘವೇಂದ್ರ ಹಾಗೂ ಯುನೀತ್‌ ಸಿದ್ಧಪಡಿಸಿದ ಮಾಡೆಲ್‌ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನಲ್ಲಿ ಆಯ್ಕೆಯಾಗಿ ದಿಲ್ಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಖುಶಿ ಎಂ. ಸಿದ್ಧಪಡಿಸಿದ ಮಾಡೆಲ್‌ಗೆ ವಿಶಾಖಪಟ್ಟಣದಲ್ಲಿ ನಡೆದ ಅ. ಭಾ. ನೌ ಸೈನಿಕ್‌ ಶಿಬಿರದಲ್ಲಿ ಬಂಗಾರದ ಪದಕ ಬಂದಿದೆ.
ಶಿಪ್‌ ಮಾಡೆಲಿಂಗ್‌ ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿ ಪದಕ ಗೆದ್ದ 9 ಕೆಡೆಟ್‌ಗಳಲ್ಲಿ 6 ಮಂದಿ ಉಜಿರೆ ಎಸ್‌ಡಿಎಂ ಕಾಲೇಜಿನವರೆಂಬುದು ವಿಶೇಷ.
ಕಾಲೇಜಿನ ನೇವಿ ಕೆಡೆಟ್‌ಗಳಾದ ಹೇಮಂತ್‌ ಎಂ.ಜಿ. ಮತ್ತು ಮಹಮ್ಮದ್‌ ನವಾಜ್‌ ಅವರು ಪ್ರಧಾನಮಂತ್ರಿಗಳ ಮತ್ತು ವಿಐಪಿಗಳ ಗಾಡ್‌ ಆಫ್‌ ಆನರ್‌ನಲ್ಲಿ ಭಾಗವಹಿಸಿದ್ದರು. ಈ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ 7 ಕೆಡೆಟ್‌ಗಳಲ್ಲಿ ಮೂವರು ಉಜಿರೆ ಕಾಲೇಜಿನವರಾಗಿದ್ದರು.
ಪ್ರಶಂಸಾ ಪತ್ರದ ಗೌರವ
ಈ ಎಲ್ಲರ ವಿಶೇಷ ಸಾಧನೆಯನ್ನು ಗಮನಿಸಿ ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ ಡೆಪ್ಯೂಟಿ ಡೈರೆಕ್ಟರ್‌ ಜನರಲ್‌(ಡಿಡಿಜಿ) ಏರ್‌ ಕಮಾಡೋರ್‌ ಬಿ.ಎಸ್‌. ಕನ್ವರ್‌ ಅವರು ಡಿಡಿಜಿ ಕಮಂಡೇಶನ್‌ (ಪ್ರಶಂಸಾ ಪತ್ರ) ನೀಡಿ ಗೌರವಿಸಿದರು.
ಎಸ್‌ಡಿಎಂ ಕಾಲೇಜಿನ ಎನ್‌ಸಿಸಿ ನೌಕಾವಿಭಾಗದ ಅಧಿಕಾರಿ ಅಸೋಸಿಯೇಟೆಡ್‌ ಎನ್‌ಸಿಸಿ ಆಫೀಸರ್‌ ಲೆಫ್ಟಿನೆಂಟ್‌ ಕಮಾಂಡರ್‌ ಶ್ರೀಧರ ಭಟ್‌ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿರಿಯ ಎನ್‌ಸಿಸಿ ಕೆಡೆಟ್‌ಗಳಾದ ಅಖಿಲೇಶ್ ಸುವರ್ಣ ಮತ್ತು ಶ್ಯಾಮಪ್ರಸಾದ್‌ ಎಚ್‌.ಪಿ. ಅವರು ಕೆಡೆಟ್‌ಗಳಿಗೆ ವಿಶೇಷ ತರಬೇತಿ ನೀಡಿದ್ದರು.

Leave a Reply

error: Content is protected !!