ರಾ.ಹೆದ್ದಾರಿ ಅಭಿವೃದ್ಧಿ: ಧರೆಗೆ ಉರುಳಲಿವೆ ಮರಗಳು

ಶೇರ್ ಮಾಡಿ

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ 2ನೇ ಹಂತದ ಕಾಮಗಾರಿಯಡಿ 2 ಕಿ.ಮೀ ನೇರ ಗೊಳಿಸಲು ತೆರುತ್ತಿರುವ ದಂಡ ಬರೋಬ್ಬರಿ 3, 042 ಮರಗಳು.

ಅಂದರೆ ಮೊದಲನೇ ಸಮೀಕ್ಷೆಯಲ್ಲಿ ಗುರುತಿಸಲಾಗಿದ್ದ ತಾಲೂಕಿನ ಅರಣ್ಯ ಇಲಾಖೆಯ 5 ಉಪ ವಲಯಗಳ ಮರಗಳ ಸಂಖ್ಯೆ 2,452. ಆ ಬಳಿಕ 35 ಕಿ.ಮೀ ರಸ್ತೆಯನ್ನು ನೇರಗೊಳಿಸಲು ಮರು ಸಮೀಕ್ಷೆ ನಡೆಸಿ 33.1 ಕಿ.ಮೀ ಗೆ ಇಳಿಸಲಾಯಿತು. ಸಾಗುವ ದೂರವೇನೋ ಸುಮಾರು 2 ಕಿ.ಮೀ ಇಳಿಯಿತು. ಆದರೆ ಇದಕ್ಕಾಗಿ 3,042 ಹೆಚ್ಚುವರಿ ಮರಗಳನ್ನು ಕಳೆದುಕೊಳ್ಳಬೇಕಾಗಿದೆ. ಹೆಚ್ಚುವರಿ ಮೂರು ಸಾವಿರ ಮರಗಳನ್ನು ಬಲಿ ಕೊಡಬೇಕಾಗಿದೆ. ಮೊದಲನೇ ಸಮೀಕ್ಷೆಗಿಂತ ಹೆಚ್ಚು, ಒಟ್ಟು 5,494 ಮರಗಳು ಧರೆಗುರುಳಲಿವೆ.
ಮೊದಲ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಕೆಲವು ಮರಗಳು ಹೊಸ ಸಮೀಕ್ಷೆಯಲ್ಲಿ ಹೊರಬಿದ್ದಿವೆ. ಮೊದಲ ಸಮೀಕ್ಷೆಯಲ್ಲಿ ಸಣ್ಣ ವಯಸ್ಸಿನ ಗಿಡಗಳನ್ನು ಪರಿಗಣಿಸಿರಲಿಲ್ಲ. ಈ ಬಾರಿ ಸೇರಿಸಿಕೊಂಡಿರುವುದೂ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ತೆರವುಗೊಳ್ಳುವ ಮರದ ಪ್ರಭೇದ, ಗಾತ್ರಕ್ಕನುಗುಣವಾಗಿ ದರ ನಿಗದಿ ಯಾಗಲಿದೆ. ತೆರವುಗೊಳ್ಳುವ ಮರವೊಂದರ ಹತ್ತು ಪಟ್ಟು ದರವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅರಣ್ಯ ಇಲಾಖೆಗೆ ಪಾವತಿಸಬೇಕು. ರಸ್ತೆ ಬದಿಯ ಹೆಚ್ಚಿನ ಮರಗಳನ್ನು ಫ್ಲೆಕ್ಸ್‌, ಬ್ಯಾನರ್‌, ಬೋರ್ಡ್‌ಗಳನ್ನು ಅಳವಡಿಸಲು ಮೊಳೆ ಇತ್ಯಾದಿ ಬಡಿದಿರುವ ಕಾರಣ ಅವು ಮೌಲ್ಯ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಹೆದ್ದಾರಿ ವಿಸ್ತರಣೆಗೆ ಪೂರಕವಾಗಿ ಮಡಂತ್ಯಾರು ಕಡೆಯಿಂದ ಗಿಡ ತೆರವು ಕಾಮಗಾರಿಯೂ ಚಾಲ್ತಿಯಲ್ಲಿದೆ.
ಅಭಿವೃದ್ಧಿ ಜತೆಗೆ ಅರಣ್ಯ ಸಂರಕ್ಷಣೆಗೂ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಪರಿಸರ ಪ್ರೇಮಿಗಳ ನಿರಂತರ ಆಗ್ರಹ.

Leave a Reply

error: Content is protected !!