ಕಡಬ: ನರ ಹಂತಕ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಗುರುವಾರ ರಾತ್ರಿ ಕೊಂಬಾರಿನ ಮಂಡೆಕರ ಬಳಿ ಪೊಲೀಸ್, ಅರಣ್ಯ ಇಲಾಖಾ ವಾಹನಗಳಿಗೆ ಹಾನಿ ಮಾಡಿದ ಆರೋಪದಲ್ಲಿ 7 ಜನ ಆರೋಪಿಗಳಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಫೆ.23 ರಂದು ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾಡಾನೆಯು ಸೆರೆಸಿಕ್ಕಿದ್ದು ಅದನ್ನು ರಾತ್ರಿ 9 ಗಂಟೆಗೆ ಅರಣ್ಯಾಧಿಕಾರಿಗಳು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಮುಂದಾದಾಗ ಕೆಲವು ಜನರು ಸ್ಥಳಕ್ಕೆ ಬಂದು ಕಾಡಾನೆ ತುಂಬಿಸಿದ ಲಾರಿಯನ್ನು ತಡೆದು ನಿಲ್ಲಿಸಿದ್ದರು. ಅಲ್ಲದೆ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲಾ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ವಾಗ್ವಾದ ಮಾಡಿದ್ದರು.
ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ನಾವು ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಹೇಳಿದರೂ ಆರೋಪಿಗಳು ಮಾತು ಕೇಳಿರಲಿಲ್ಲ. ಈ ವೇಳೆ ಅರಣ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಜನರಿಗೆ ತಿಳುವಳಿಕೆ ಹೇಳಿದ್ದರು. ಆದರೆ ಆರೋಪಿಗಳು ಕರ್ತವ್ಯದಲ್ಲಿದ್ದ ಪೊಲೀಸರಿಗೂ ಮತ್ತು ಅರಣ್ಯ ಸಿಬ್ಬಂದಿಗೂ ಕಲ್ಲು ತೂರಾಟ ಮಾಡಿದ್ದರು. ಆರೋಪಿಗಳು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖಾ ವಾಹನ ಹಾಗೂ ಪೊಲೀಸು ಇಲಾಖಾ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ.
ಆರೋಪಿಗಳ ವಿರುಧ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಸರಕಾರಿ ವಾಹನಗಳಿಗೆ ಹಾನಿ ಮುಂತಾದ ಹಲವು ಪ್ರಕರಣಗಳು ದಾಖಲಾಗಿದೆ.