ಕಡಬ:ಏಳನೇ ವೇತನ ಆಯೋಗದ ಶಿಫಾರಸುಗಳನ್ನು ತತ್‌ಕ್ಷಣ ಜಾರಿಗೆ ತರಬೇಕು ಎಂದು ಬಿಗಿ ಪಟ್ಟು ಹಿಡಿದಿರುವ ಸರಕಾರಿ ನೌಕರರು ಬುಧವಾರದಿಂದ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಸರಕಾರದ ವಿರುದ್ಧ ಅಸಹಕಾರ ಚಳವಳಿಗೆ ಸಜ್ಜಾಗಿದ್ದಾರೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಸರಕಾರಿ ನೌಕರರ ಈ ನಡೆ ಸರಕಾರ ಮತ್ತು ಆಡಳಿತ ಪಕ್ಷವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಕರ್ತವ್ಯ ನಿರತರು ಹಾಗೂ ಪಿಂಚಣಿದಾರರು ಸೇರಿ 14 ಲಕ್ಷ ಮಂದಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರದಿಂದ ಸರಕಾರದ ಅನೇಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ರಾಜ್ಯ ಸರಕಾರಿ ನೌಕರರ ಸಂಘ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಘದ ಪದಾಧಿಕಾರಿಗಳೊಂದಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸಂಧಾನ ನಡೆಸಿದರೂ ಯಶಸ್ಸು ಕಂಡಿಲ್ಲ. ತೀವ್ರ ಹೋರಾಟದ ಎಚ್ಚರಿಕೆಯನ್ನು ಕಳೆದ ನವೆಂಬರ್- ಡಿಸೆಂಬರ್ ತಿಂಗಳಲ್ಲೇ ಸಂಘ ನೀಡಿತ್ತು. ಎನ್‌ಪಿಎಸ್ ನೌಕರರ ಸಂಘ ಹೋರಾಟ ಸಂದರ್ಭದಲ್ಲಿ ನಮಗೆ ಎನ್‌ಪಿಎಸ್ ಬೇಡ. ಆದರೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ವಿಮಲ್ ನೆಲ್ಯಾಡಿ ಅವರು ಎಚ್ಚರಿಸಿದ್ದರು.
ಪ್ರಮುಖ ಬೇಡಿಕೆಗಳು
ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಾಂತರ ವರದಿಯನ್ನು 7ನೇ ವೇತನ ಆಯೋಗದಿಂದ ಶೀಘ್ರ ಪಡೆದು 2022ರ ಜು.1ರಿಂದ ಜಾರಿಗೆ ಬರುವಂತೆ ಶೇ.40 ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಎನ್‌ಪಿಎಸ್ ರದ್ದು ಪಡಿಸಿ ಒಪಿಎಸ್ ಜಾರಿಗೊಳಿಸಬೇಕು.
5 ವರ್ಷಗಳ ಬಳಿಕ ಮುಷ್ಕರ!
ವೇತನ ಪರಿಷ್ಕರಣೆಗಾಗಿ ವಿವಿಧ ವೇತನ ಆಯೋಗಗಳ ಶಿಫಾರಸು ಜಾರಿಗೆ ನೌಕರರು ಮತ್ತು ಸರಕಾರದ ನಡುವೆ ಶೀತಲ ಸಮರ ನಡೆಯುತ್ತಲೇ ಇರುತ್ತದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿರಲಿಲ್ಲ. 5ನೇ ವೇತನ ಆಯೋಗದ ಅನುಷ್ಠಾನಕ್ಕೆ ಆಗ್ರಹಿಸಿ ಸರಕಾರಿ ನೌಕರರು 2018ರಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಮುಷ್ಕರ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ತಮ್ಮ ಕಾಲದಲ್ಲಿ ಗರಿಷ್ಠ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.
ಏನೇನು ವ್ಯತ್ಯಯ?
-ತುರ್ತು ಚಿಕಿತ್ಸೆ ಮಾತ್ರ ವೈದ್ಯಕೀಯ ಸಿಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರು. ತುರ್ತು ಚಿಕಿತ್ಸೆ ಸೇವೆ ಮಾತ್ರ ಲಭ್ಯ.
-ಸಂಚಾರ ಯಥಾಸ್ಥಿತಿ ಕೆಎಸ್ಸಾರ್ಟಿಸಿ ಬಸ್ ಓಡಾಟ ನಡೆಸಲಿವೆ. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಬಂದಿಯಿಂದ ಧರಣಿ.
-ಪಾಠ, ಪರೀಕ್ಷೆಗಳಿಗೂ ಸಮಸ್ಯೆ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಕರ್ತವ್ಯಕ್ಕೆ ಗೈರಾಗಲಿದ್ದಾರೆ. ಶಾಲಾ ಕಾಲೇಜು ಪಾಠ ಪ್ರವಚನ, ಪರೀಕ್ಷೆ ಚಟುವಟಿಕೆ ವ್ಯತ್ಯಯವಾಗಲಿವೆ.
-ಕಸ ಸಂಗ್ರಹಕ್ಕೆ ತೊಂದರೆ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿರುವುದರಿಂದ ಕಸ ಸಂಗ್ರಹ -ಸ್ವಚ್ಛತಾ ಕೆಲಸ ವ್ಯತ್ಯಯ.
-ಆಸ್ತಿ ನೋಂದಣಿ, ಜಾತಿ ಪತ್ರಕ್ಕೆ ಅಡ್ಡಿ ಕಂದಾಯ ಇಲಾಖೆ ಸಿಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಆಸ್ತಿ ನೋಂದಣಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಪಡೆಯುವ ಸೇವೆಗಳು ಸ್ಥಗಿತಗೊಳ್ಳಲಿವೆ.
ಬುಧವಾರದಿಂದ ಎಲ್ಲ ಸರಕಾರಿ ಕಚೇರಿಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ಇತರ ಕೆಲಸ ಇರುವುದಿಲ್ಲ. ಸರಕಾರದ ಯಾವುದೇ ಭರವಸೆಗಳಿಗೆ ಬಗ್ಗುವುದಿಲ್ಲ. ಅಧಿಕೃತ ಆದೇಶ ಬಾರದ ಹೊರತು ಪ್ರತಿಭಟನೆ ಕೈ ಬಿಡುವುದಿಲ್ಲ. ತೀರ್ಮಾನಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ