ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ, ಗೋಳಿತೊಟ್ಟು ಹಾಗೂ ಇಚ್ಲಂಪಾಡಿ ಭಾಗಗಳಲ್ಲಿ ಮಾ.3ರಂದು ಅಗ್ನಿ ಅವಘಡ ಉಂಟಾಗಿ ಅಪಾರ ಪ್ರಮಾಣದ ಗೇರು ಕೃಷಿ ಹಾಗೂ ರಬ್ಬರ್ ಕೃಷಿ ಹಾನಿಯಾಗಿದೆ. ಕೊಣಾಲು ಗ್ರಾಮದ ತಿರ್ಲೆ, ಶಾಂತಿಮಾರು, ನೆಲ್ಯಾಡಿ ಗ್ರಾಮದ ತೊಟ್ಟಿಲಗುಂಡಿ, ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಚಂದ್ರನ್ ಪಿಳ್ಳೆರವರಿಗೆ ಸೇರಿದ ರಬ್ಬರ್ ತೋಟಕ್ಕೆ ಅಗ್ನಿ ಸ್ಪರ್ಶವಾಗಿದೆ.
ಕೊಣಾಲು ಹಾಗೂ ನೆಲ್ಯಾಡಿ ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕದಿಂದ ಹಾರಿದ ಕಿಂಡಿಯಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೊಣಾಲಿನಲ್ಲಿ 100ಕ್ಕಿಂತಲೂ ಅಧಿಕ ಫಲ ಭರಿತ ಗೇರು ಮರಗಳು, ನೆಲ್ಯಾಡಿಯಲ್ಲಿ 40ಕ್ಕೂ ಅಧಿಕ ಫಲ ಭರಿತ ಗೇರು ಮರಗಳು ಅಗ್ನಿಗೆ ಆಹುತಿಯಾಗಿವೆ.
ಇಚ್ಲಂಪಾಡಿಯಲ್ಲಿ 30ಕ್ಕೂ ಅಧಿಕ ರಬ್ಬರ್ ಗಿಡಗಳು ಹಾನಿಯಾಗಿವೆ. ಘಟನಾ ಸ್ಥಳಕ್ಕೆ ಡಿಆರ್‌ಎಫ್‌ಒ ಸುನೀಲ್ ಮತ್ತು ಸಿಬ್ಬಂದಿಗಳು, ನೆಲ್ಯಾಡಿ ಹೊರಠಾಣ ಹೆಚ್ ಸಿ ಬಾಲಕೃಷ್ಣ ಮತ್ತು ಸಿಬ್ಬಂದಿಗಳು, ಮೆಸ್ಕಾಂ ಸಿಬ್ಬಂದಿಗಳು, ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕ್ಲಪ್ತ ಸಮಯದಲ್ಲಿ ಸ್ಪಂದಿಸಿ ಬೆಂಕಿಯನ್ನು ನಂದಿಸಿದರು.