ಕೆಲಸದಾಳುವಿನಿಂದ ಮನೆಯೊಡತಿಯ ಕೊಲೆ ಯತ್ನ; ಆರೋಪಿಗಳ ಬಂಧನ

ಶೇರ್ ಮಾಡಿ

ಸುಳ್ಯ: ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮನೆಯೊಡತಿಯ ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೈಯಲು ಪ್ರಯತ್ನಿಸಿರುವ ಘಟನೆ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ಮಾ.2ರ ರಾತ್ರಿ ನಡೆದಿದೆ.

ವರದರಾಜ್‌(30), ಪಿ.ಪಿ.ಪೌಲೋಸ್‌ ಅವರ ಪುತ್ರ ಸೈಜಾನ್‌ ಪಿ.ಪಿ.(38)ಆರೋಪಿಗಳು.
ವರದರಾಜ್‌ ಹಾಗೂ ಸೈಜಾನ್‌ ನಾಲ್ಕು ತಿಂಗಳಿಂದ ಕರಿಕ್ಕಳದ ವಿಶ್ವನಾಥ್‌ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮಾ.2ರಂದು ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು, ಪೇಟೆಗೆ ತೆರಳಿ ಬಂದಿದ್ದರು.

ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಮನೆಯ ಮಹಡಿಯನ್ನು ಹತ್ತಿ ಮೇಲೆ ಬಂದಿದ್ದಾರೆ. ಮಹಡಿಯಲ್ಲಿದ್ದ ಮನೆ ಮಾಲಕ ವಿಶ್ವನಾಥ್‌ ಅವರ ಪತ್ನಿ ಗಾಯತ್ರಿ (61) ಅವರ ಕುತ್ತಿಗೆಯನ್ನು ವರದರಾಜ್‌ ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇನ್ನೊರ್ವ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪದ ಸುರೇಶ್‌ ಹಾಗೂ ಕೆಲಸದ ಪ್ರೇಮಾ ಅಲ್ಲಿಗೆ ಬಂದು ಆರೋಪಿಗಳನ್ನು ಹಿಡಿಯುವಷ್ಟರಲ್ಲಿ ವರದರಾಜ್‌ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಇರಿದ ಪರಿಣಾಮ ಗಾಯವಾಗಿದೆ. ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಗಾಯತ್ರಿ ಮನೆಯಲ್ಲಿ ಅವರ ಪತಿಯ ಜತೆಗಿದ್ದು, ಪತಿಗೆ ನಡೆದಾಡಲು ಅಸಾಧ್ಯವಾಗಿದೆ. ಇದನ್ನು ತಿಳಿದು ಆರೋಪಿಗಳು ಮೊದಲೇ ಸಂಚು ರೂಪಿಸಿ ಮನೆಯೊಡತಿಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ ಎಂದು ಗಾಯತ್ರಿ ಅವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ವರದರಾಜ್‌ ಚಿತ್ರದುರ್ಗ ಮೂಲದವನಾಗಿದ್ದು, ಸೈಜಾನ್‌ ಧರ್ಮಸ್ಥಳದವನು ಎಂದು ತಿಳಿದುಬಂದಿದೆ.

See also  ಹಳೆಯ ವೈಷಮ್ಯದಿಂದ ಸ್ನೇಹಿತನ ಕೊಲೆ ಯತ್ನ, ಒಂದು ಕೈ ತುಂಡು

Leave a Reply

Your email address will not be published. Required fields are marked *

error: Content is protected !!