5, 8ನೇ ತರಗತಿ ಮೌಲ್ಯಾಂಕನಕ್ಕೆ ಹಲವು ಗೊಂದಲಗಳೊಂದಿಗೆ ಅಗ್ನಿ ಪರೀಕ್ಷೆ

ಶೇರ್ ಮಾಡಿ

5 ಮತ್ತು 8ನೇ ತರಗತಿಗಳ ಇದೇ ಮೊದಲ ಬಾರಿಗೆ ನಡೆಯಲಿರುವ ಮೌಲ್ಯಾಂಕನ ಪರೀಕ್ಷೆಗೆ ನಿಗದಿ ಮಾಡಲಾದ ಪರೀಕ್ಷಾ ಕೇಂದ್ರಗಳು ಮಕ್ಕಳ ಪಾಲಿಗೆ ಬಹುದೂರವಾಗಿದೆ.
ಶಾಲಾವಾರು ಮಕ್ಕಳ ಸಂಖ್ಯೆ ಆಧರಿಸಿ 5ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಹಾಗೂ 8ನೇ ತರಗತಿಯ ಕೇಂದ್ರದಲ್ಲಿ ಕನಿಷ್ಠ 50 ಮಕ್ಕಳು ಇರುವಂತೆ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಇದು ಗ್ರಾಮಾಂತರ ಭಾಗದ ಹಲವು ಶಾಲೆಗಳ ಮಕ್ಕಳು ಪರೀಕ್ಷಾ ಕೇಂದ್ರಕ್ಕಾಗಿ ಕಿ.ಮೀ.ಗಟ್ಟಲೆ ಸಂಚರಿಸಬೇಕಾದ ಅನಿವಾರ್ಯ ಸೃಷ್ಟಿಸಿದೆ.
ಕೆಲವು ಕಡೆ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ 4-5 ಕಿ.ಮೀ. ದೂರವಿದೆ. ಇಲ್ಲಿಗೆ ಸರಕಾರಿ ಶಾಲೆಯ ಮಕ್ಕಳನ್ನು ಅಲ್ಲಿನ ಅಧ್ಯಾಪಕರೇ ಕರೆದುಕೊಂಡು ಹೋಗಬೇಕು. ಆದರೆ ಅಧ್ಯಾಪಕರ ಕೊರತೆ ಇರುವ ಶಾಲೆಗಳಲ್ಲಿ ಇದಕ್ಕೆ ಪರಿಹಾರವೇನು ಎಂಬುದು ಯಕ್ಷಪ್ರಶ್ನೆ. ಗ್ರಾಮಾಂತರ ಭಾಗದಲ್ಲಿ ಶಾಲೆಗಳು ದೂರದಲ್ಲಿ ಇರುವುದರಿಂದ ಪುಟಾಣಿಗಳ ಹೊಸ ಪರೀಕ್ಷೆ ಹೆತ್ತವರಿಗೂ ಅಗ್ನಿಪರೀಕ್ಷೆಯಾಗಿದೆ.

ಇದೇ ಮೊದಲ ಬಾರಿಯ ಮೌಲ್ಯಾಂಕನ ಪರೀಕ್ಷೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯವನ್ನು ಬೆಳಗ್ಗೆ ಇರಿಸಬಹುದು ಎಂದು ಬಹುತೇಕರು ನಿರೀಕ್ಷಿಸಿದ್ದರು. ಆದರೆ ಕೆಲವು ಕೇಂದ್ರಗಳಲ್ಲಿ ಇದೇ ವೇಳೆ ದ್ವಿತೀಯ ಪಿಯು ಪರೀಕ್ಷೆ ನಡೆಯುವ ಕಾರಣ 5, 8ರ ಪರೀಕ್ಷೆ ಅಪರಾಹ್ನ 2.30ಕ್ಕೆ ಆರಂಭವಾಗಿ ಸಂಜೆ 4.30ರ ವರೆಗೆ ನಡೆಯಲಿದೆ. ಹೀಗಾಗಿ ಮಕ್ಕಳ ಪರೀಕ್ಷೆಗಾಗಿ ಹೆತ್ತವರು ರಜೆ ಮಾಡುವಂತಾಗಿದೆ.

ಪಠ್ಯಪುಸ್ತಕ ಬೋಧನೆ ಕಿರಿಕ್‌:
ಕೊರೊನಾ ಅನಂತರ ಮಕ್ಕಳ ಪರಿಹಾರ ಬೋಧನೆಗೆ ಅನುಕೂಲವಾಗಲು
ಕಲಿಕಾ ಚೇತರಿಕೆ ಪುಸ್ತಕ ಸಿದ್ಧಪಡಿಸಲಾಗಿತ್ತು. ಸರಕಾರಿ ಶಾಲೆಯವರು ಇದನ್ನೇ ಕಡ್ಡಾಯವಾಗಿ ಅಭ್ಯಸಿಸಬೇಕು ಹಾಗೂ ವರ್ಷದ ಪಠ್ಯಪುಸ್ತಕವನ್ನು ಕೇವಲ ಗೈಡ್‌ ಆಗಿ ಮಾತ್ರ ತೆಗೆದುಕೊಳ್ಳಲು ಸರಕಾರ ಸೂಚಿಸಿತ್ತು. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮಾತ್ರ ಕಲಿಕಾ ಚೇತರಿಕೆ ಇಲ್ಲ, ಅಲ್ಲಿ ಪಠ್ಯಪುಸ್ತಕ ಮಾತ್ರ ಬೋಧನೆ ಇದೆ. ಸದ್ಯ ಬಿಡುಗಡೆಯಾಗಿರುವ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕಲಿಕಾ ಚೇತರಿಕೆ ಪುಸ್ತಕದ ಪ್ರಶ್ನೆಗಳು ಬೆರಳೆಣಿಕೆಯಷ್ಟಿದ್ದು, ಪಠ್ಯಪುಸ್ತಕದ ಪ್ರಶ್ನೆಗಳು ಹೆಚ್ಚು ಇವೆ. ಹೀಗಾಗಿ ಇದು ಸರಕಾರಿ ಶಾಲೆ ಮಕ್ಕಳಿಗೆ ಸಮಸ್ಯೆ ಆಗಬಹುದು ಎಂಬ ಅಸಮಾಧಾನವೂ ಕೇಳಿಬಂದಿದೆ.

ತಡವಾಗಿ ಬಂದ ಮಾದರಿ ಪ್ರಶ್ನೆಗಳು:
5 ಹಾಗೂ 8ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವಾಗ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಪರೀಕ್ಷೆ ನಡೆಸುವ ಬಗ್ಗೆ ಡಿಸೆಂಬರ್‌ನಲ್ಲಿಯೇ ಸರಕಾರ ಘೋಷಿಸಿತ್ತು. ಜನವರಿ ಮೊದಲ ವಾರದಲ್ಲಿ ಮಾದರಿ ಪ್ರಶ್ನೆಪತ್ರಿಕೆ ಬರಲಿದೆ ಎಂದೂ ತಿಳಿಸಿದ್ದರು. ಆದರೆ ಪ್ರಶ್ನೆಪತ್ರಿಕೆ ಬಂದದ್ದು ವಾರದ ಹಿಂದೆ. ಹೀಗಾಗಿ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಕಷ್ಟವಾಗಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆಯಾಗಿದೆ ಎಂದು ಕೆಲವು ಅಧ್ಯಾಪಕರು ತಿಳಿಸಿದ್ದಾರೆ.

ಇದುವರೆಗೆ 5, 8 ಮಕ್ಕಳಿಗೆ ಆಯಾ ಶಾಲೆಯಲ್ಲಿಯೇ ಯಶಸ್ವಿಯಾಗಿ ಪರೀಕ್ಷೆ ನಡೆದಿತ್ತು. ಈ ಬಾರಿ ಬೇರೆ ಶಾಲೆಗೆ ಮಕ್ಕಳಗಳನ್ನು ಕರೆದುಕೊಂಡು ಪರೀಕ್ಷೆ ನಡೆಸುವ ಹೊಸ ಸವಾಲು ಇದೆ. ಹಿಂದಿನಂತೆ ಪರೀಕ್ಷೆ ಆಯಾ ಶಾಲೆಯಲ್ಲಿ ನಡೆಯಲಿ. ಪರಿಶೀಲನೆಗೆ ಬೇರೆ ಶಾಲೆಯ ಅಧ್ಯಾಪಕರು ಬರಲಿ. ಇದರಿಂದ ಮಕ್ಕಳ ಅನಾವಶ್ಯಕ ಓಡಾಟ ತಪ್ಪಿಸಬಹುದು. ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ

Leave a Reply

error: Content is protected !!