ದೃಢಸಂಕಲ್ಪ, ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆಯೊಂದಿಗೆ ತಂದೆ- ತಾಯಿ, ಗುರು-ಹಿರಿಯರನ್ನು ಗೌರವಿಸಿ – ಡಾ.ನಾ ಮೊಗಸಾಲೆ

ಶೇರ್ ಮಾಡಿ

ಉಜಿರೆ: ದೃಢಸಂಕಲ್ಪ, ಪ್ರಬಲ ಇಚ್ಛಾಶಕ್ತಿ ಮತ್ತು ಬದ್ಧತೆಯೊಂದಿಗೆ ತಾಯಿ-ತಂದೆ ಹಾಗೂ ಗುರು-ಹಿರಿಯರನ್ನು ಗೌರವಿಸಿ ನಾವು ಸಾರ್ಥಕ ಜೀವನ ನಡೆಸಬೇಕು. ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳುವುದೇ ಧರ್ಮದ ಉದ್ದೇಶವಾಗಿದೆ ಎಂದು ಖ್ಯಾತ ಸಾಹಿತಿ ಕಾಂತಾವರದ ಡಾ.ನಾ ಮೊಗಸಾಲೆ ಹೇಳಿದರು.

ಅವರು, ಭಾನುವಾರ ಉಜಿರೆಯಲ್ಲಿ ಅರಿಪ್ಪಾಡಿಮಠ ಕಲಾವೇದಿಕೆಯಲ್ಲಿ ಮುಂಡಾಜೆಯ ಹಿರಿಯ ಪತ್ರಕರ್ತ ಕೆ.ಶ್ರೀಕರ ಭಟ್ ಮರಾಠೆ ತನ್ನ ತಾಯಿ ಕವಯಿತ್ರಿ ಈದು ಗ್ರಾಮದ ಕೊಪ್ಪಲ ನಿವಾಸಿ ಕೀರ್ತಿಶೇಷ ಸುಶೀಲಾ ಬಾಯಿ ಮರಾಠೆ ಅವರ ಸವಿನೆನಪಿನಲ್ಲಿ ಗುಪ್ತಗಾಮಿನಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ವೇದಗಳು, ಪುರಾಣಗಳು, ಮನುಸ್ಮೃತಿ, ಅನೇಕಾಂತ ಮೊದಲಾದ ಜೈನ ಸಿದ್ಧಾಂತಗಳು, ಬೌದ್ಧತತ್ವಗಳು ನಮಗೆ ಸಾರ್ಥಕ ಬದುಕಿಗೆ ಪ್ರೇರಣೆ, ಮಾರ್ಗದರ್ಶನ ನೀಡುತ್ತವೆ. ಆದರೆ, ಯಾವುದೂ ಸಾರ್ವಕಾಲಿಕ ಸತ್ಯವಾಗಿರುವುದಿಲ್ಲ. ಆಯಾ ಕಾಲ, ಸಂದರ್ಭಕ್ಕೆ ತಕ್ಕಂತೆ ಆಂಶಿಕ ಸತ್ಯ ಮಾತ್ರ ಅಲ್ಲಿ ಅಡಕವಾಗಿರುತ್ತದೆ. ನಿತ್ಯವೂ ನಾವು ಮಾಡುವ ಕಾಯಕದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಸಾಧಿಸುವುದು ಪ್ರತಿಯೊಬ್ಬನ ಹೊಣೆಗಾರಿಕೆಯೂ, ಕರ್ತವ್ಯವೂ ಆಗಿದೆ. ಪ್ರತಿ ದಿನ ಒಂದು ಗಂಟೆಯಾದರೂ ನಾವು ಧನಾತ್ಮಕ ಚಿಂತನೆಯೊಂದಿಗೆ ಆದರ್ಶ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಋಣಾತ್ಮಕ ಚಿಂತನೆಗಳನ್ನು ಕಡಿಮೆ ಮಾಡಬೇಕು ಎಂದು ಅವರು ಸಲಹೆ ನೀಡಿರು. ಪ್ರತಿಯೊಂದು ಕಾಯಕವನ್ನೂ ಕೌಶಲಯುಕ್ತವಾಗಿ ಮಾಡಬೇಕು. ಕಾವ್ಯ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಅಧ್ಯಯನದಿಂದ ನಮ್ಮಲ್ಲಿ ನವಚೈತನ್ಯ ಮತ್ತು ಉತ್ಸಾಹ ಮೂಡಿ ಬರುತ್ತದೆ. ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಏಕಾಗ್ರತೆಯಿಂದ ಸಾಹಿತ್ಯದ ಅಧ್ಯಯನ ಮಾಡಬೇಕೆಂದು ಸಲಹೆ ನೀಡಿರು, ಕಾಂತಾವರದಲ್ಲಿ ವಾನಪ್ರಸ್ತಾಶ್ರಮ ಸ್ಥಾಪಿಸುವ ಯೋಜನೆ ಇದೆ ಎಂದು ಪ್ರಕಟಿಸಿದರು.
ಡಾ. ನಾ. ಮೊಗಸಾಲೆ ಮತ್ತು ಪ್ರೇಮಾ ಭಟ್ ದಂಪತಿಯನ್ನು ಗೌರವಿಸಲಾಯಿತು.
ಸಂಗೀತ ಶಿಕ್ಷಕಿ ಉಜಿರೆಯ ಅನಸೂಯಾ ದೇವಸ್ಥಳಿ ಕವನವನ್ನು ಹಾಡಿದರು. ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ ಗುಪ್ತಗಾಮಿನಿ ಸಾಹಿತ್ಯ ಶಾಲೆಯ ಚಟುವಟಿಕೆಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಮುಂಡಾಜೆಯ ಶ್ರೀಕರ ಭಟ್, ಗುಪ್ತಗಾಮಿನಿ ಸಾಹಿತ್ಯ ಶಾಲೆಯ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ, ತರಬೇತಿ ನೀಡಲಾಗುವುದು ಎಂದು ಹೇಳಿದರು. ನಾರಾಯಣ ಫಡ್ಕೆ ಧನ್ಯವಾದವಿತ್ತರು. ಶೈಲೇಶ ಠೋಸರ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

error: Content is protected !!