ಮಂಗಳೂರು: ವಾಟ್ಸಾಪ್ ಗೆ ಬಂದ ಸಂದೇಶದಂತೆ ಗ್ರೂಪ್ ಒಂದಕ್ಕೆ ಸೇರಿದ ಪರಿಣಾಮ ವ್ಯಕ್ತಿಯೊಬ್ಬರು 1.75 ಲಕ್ಷ ರೂ. ವಂಚನೆಗೊಳಗಾದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದೂರುದಾರರು ನೀಡಿರುವ ಹೇಳಿಕೆಯಂತೆ, ಇ ಕೆರಿಯರ್ ಬಿಲ್ಡರ್ ಎಂಬ ಟೆಲಿಗ್ರಾಮ್ ಚಾನಲ್‌ಗೆ ಸೇರುವಂತೆ ಸಂದೇಶ ಬಂದ ಕಾರಣ ಗ್ರೂಪ್ ಗೆ ಸೇರಿದ್ದರು. ಅಲ್ಲಿ ಪಾರ್ಟ್‌ಟೈಮ್ ಉದ್ಯೋಗದ ಬಗ್ಗೆ ವಿವರಗಳನ್ನು ತಿಳಿಸಿ, ಗ್ರೂಪ್‌ನಲ್ಲಿ ಅವರು ಕಳುಹಿಸುವ ಯೂಟ್ಯೂಬ್ ಚಾನೆಲ್ ಲಿಂಕ್‌ಗಳನ್ನು ಲೈಕ್ ಮತ್ತು ಸಬ್‌ಸ್ಕ್ರೈಬ್ ಮಾಡಲು ತಿಳಿಸಲಾಗಿತ್ತು.
ಅದರಂತೆ ದೂರುದಾರರು ಲೈಕ್ ಮತ್ತು ಸಬ್‌ಸ್ಕ್ರೈಬ್ ಮಾಡಿದ್ದಾರೆ. ಮೊದಲ ಹಂತದಲ್ಲಿ 7900 ರೂ. ಇವರಿಗೆ ಜಮೆಯಾಗಿದೆ. ನಂತರ ಆರೋಪಿಗಳು ಯೂ ಟ್ಯೂಬ್ ಚಾನೆಲ್‌ಗಳನ್ನು ಹೊರತಾಗಿ ಪ್ರೀಪೇಯ್ಡ ಟಾಸ್ಕ್‌ಗಳನ್ನು ಪರಿಚಯಿಸಿ ಹಣ ಹಾಕುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ಮಾ.22ರಂದು ಟೆಲಿಗ್ರಾಮ್ ಚಾನಲ್ ಮೂಲಕ ಸ್ವೀಕೃತವಾದ ಖಾತೆ ಸಂಖ್ಯೆಗೆ ತನ್ನ ಪತ್ನಿಯ ಖಾತೆಯಿಂದ 1.50 ಲಕ್ಷ ರೂ. ಹಾಗೂ ತನ್ನ ಬ್ಯಾಂಕ್ ಖಾತೆಯಿಂದ 25 ಸಾವಿರ ರೂ. ಕಳುಹಿಸಿದ್ದಾರೆ. ನಂತರ ದೂರುದಾರರು ಹೂಡಿಕೆ ಮಾಡಿದ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು ತಾನು ಮೋಸ ಹೋಗಿರುವ ಅರಿವಾಗಿ ದೂರು ನೀಡಿದ್ದಾರೆ.