ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಪುತ್ತೂರು, ಕಡಬ ತಾಲೂಕಿನಲ್ಲಿ 5096 ವಿದ್ಯಾರ್ಥಿಗಳು

ಶೇರ್ ಮಾಡಿ

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಹೊಸದಾಗಿ 4855, ಖಾಸಗಿಯಾಗಿ 241 ಸೇರಿದಂತೆ ಒಟ್ಟು 5096 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾವಣೆಗೊಂಡಿದ್ದಾರೆ. ಇದರೊಂದಿಗೆ ಒಟ್ಟು 241 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದಾರೆ.

15 ಪರೀಕ್ಷಾ ಕೇಂದ್ರಗಳು
ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ, ನಗರದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ನೆಹರೂನಗರ ಸುದಾನ ವಸತಿಯುತ ಶಾಲೆ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜು, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ ಸಂತ ಮೇರೀಸ್ ಪ್ರೌಢಶಾಲೆ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್, ಸವಣೂರು ವಿದ್ಯಾರಶ್ಮಿ ಪ್ರೌಢಶಾಲೆ, ನೆಲ್ಯಾಡಿ ಸೈಂಟ್ ಜಾರ್ಜ್ ಪದವಿ ಪೂರ್ವ ಕಾಲೇಜು, ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆ, ರಾಮಕುಂಜ ರಾಮಕುಂಜೇಶ್ವರ ಪ್ರೌಢಶಾಲೆ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿದೆ.
ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಣೆಗಾಗಿ ಒಟ್ಟು 390 ಮಂದಿ ಸಿಬಂದಿಗಳನ್ನು ನೇಮಿಸಲಾಗಿದೆ. ಈ ಪೈಕಿ 15 ಮಂದಿ ಮುಖ್ಯ ಅಧೀಕ್ಷಕರು, 8 ಮಂದಿ ಉಪ ಅಧೀಕ್ಷಕರು, 317 ಕೊಠಡಿ ಮೇಲ್ವಿಚಾರಕರು, 15 ಮಂದಿ ಕಸ್ಟೋಡಿಯನ್, 15 ಮಂದಿ ಸ್ಥಾನಿಕ ಜಾಗೃತ ದಳ ಅಧಿಕಾರಿಗಳು, 15 ಮಂದಿ ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು, 5 ಮಂದಿ ರೂಟ್ ಆಫೀಸರ್‍ಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಅಲ್ಲದೆ ಪ್ರತಿ ಕೇಂದ್ರಗಳಲ್ಲಿಯೂ ಪೊಲೀಸ್ ಸಿಬ್ಬಂದಿಗಳು, ಆರೋಗ್ಯದ ಸುರಕ್ಷತೆಗಾಗಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಲಿದ್ದಾರೆ. ಭಧ್ರತೆಯ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲೂ ಸಿಸಿ ಕೆಮಾರ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.

Leave a Reply

error: Content is protected !!