ಮಂಗಳೂರು: ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿದ 70ರ ಮಹಿಳೆ ತತ್‌ಕ್ಷಣವೇ ಎಚ್ಚೆತ್ತುಕೊಂಡು ಸಮಯಪ್ರಜ್ಞೆಯಿಂದ ಕೆಂಪುಬಟ್ಟೆ ಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದಾರೆ.
ಪಡೀಲ್ – ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರ ದಲ್ಲಿ ಈ ಘಟನೆ ಸಂಭವಿಸಿದ್ದು, ಕುಡುಪು ಆಯರ ಮನೆ ಚಂದ್ರಾವತಿ ಅವರು ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದವರು.
ಮಾ. 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರ ಬಿದ್ದಿತ್ತು. ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ವಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ತತ್‌ಕ್ಷಣವೇ ಗಮನಿಸಿದ 70 ವರ್ಷ ಪ್ರಾಯದ ಚಂದ್ರಾವತಿ ಅವರು ಏನು ಮಾಡಬೇಕು ಎಂದು ತೋಚದೆ, ತತ್‌ಕ್ಷಣವೇ ಮನೆಯಲ್ಲಿದ್ದ ಕೆಂಪು ವಸ್ತ್ರವನ್ನು ತಂದು ರೈಲು ಬರುವ ಸಮಯಕ್ಕೆ ಪ್ರದರ್ಶಿಸಿ ಲೋಕೋಪೈಲೆಟ್ ಅವರ ಗಮನ ಸೆಳೆದರು. ಅಪಾಯ ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯವರು ಸೇರಿ ಮರ ತೆರವು ಮಾಡಿದರು.