ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಯು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG) ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿದೆ.
ಈ ಹಿಂದೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಾಯದ ಮೇರೆಗೆ ಏಪ್ರಿಲ್ 11 ರಂದು ಅಪ್ಲಿಕೇಷನ್ ವಿಂಡೋವನ್ನು ಪುನಃ ತೆರೆದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಈ ಹಿನ್ನಲೆಯಲ್ಲಿ ಈಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅರ್ಜಿ ದಿನಾಂಕವನ್ನು ಏಪ್ರಿಲ್ 15ರವರೆಗೆ ವಿಸ್ತರಣೆ ಮಾಡಿದೆ.
ತಾಂತ್ರಿಕ ದೋಷಗಳಿಂದ ಈ ಹಿಂದೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಮತ್ತು ಇಲ್ಲಿಯವರೆಗೆ ನೀಟ್ ಯುಜಿ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳದವರು ಅಥವಾ ಇದೇ ಮೊದಲ ಬಾರಿಗೆ ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ವಿವಿಧ ಕಾರಣಗಳಿಂದ ಇಲ್ಲಿಯವರೆಗೆ ಅರ್ಜಿ ಸಲ್ಲಿಕೆ ಸಾಧ್ಯವಾಗದೆ ಇರುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಕೆ ವಿಂಡೋ ಮತ್ತೆ ತೆರೆಯಲಾಗಿದೆ. ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ಅರ್ಜಿ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ.
ನೀಟ್ ಯುಜಿ 2023 ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://neet.nta.nic.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ದ್ವಿತೀಯ ಪಿಯುಸಿ ಅಥವಾ 12ನೇತರಗತಿ ವಿಜ್ಞಾನ ವಿಭಾಗದಲ್ಲಿ ಜೀವಶಾಸ್ತ್ರ ವಿಷಯವನ್ನು ಮುಖ್ಯವಿಷಯವನ್ನಾಗಿ ಬೋರ್ಡ್ ಪರೀಕ್ಷೆಯನ್ನು ಬರೆದಿರುವ ಮತ್ತು ಉತ್ತೀರ್ಣರಾಗಿರುವ ಅಭ್ಯರ್ಥಿಗಳು ನೀಟ್ ಯುಜಿ 2023 ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ನೀಟ್ ಯುಜಿ 2023 ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://neet.nta.nic.in/ ಗೆ ಭೇಟಿ ನೀಡಿ.
ಮುಖಪುಟದಲ್ಲಿ ನೀಟ್ ಯುಜಿ 2023 ರಿಜಿಸ್ಟ್ರೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಆ ಪುಟದಲ್ಲಿ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ.
ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿ ಸಂಖ್ಯೆಯನ್ನು ಸೇವ್ ಮಾಡಿಟ್ಟುಕೊಳ್ಳಿ.
ನಂತರ ಅರ್ಜಿ ಶುಲ್ಕವನ್ನು ಪಾವತಿಸಿ.
ನೋಂದಣಿಯನ್ನು ಪೂರ್ಣಗೊಳಿಸಲು ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
ನಂತರ ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ನೀಟ್ ಯುಜಿ ಪ್ರವೇಶ ಪರೀಕ್ಷೆಯನ್ನು MBBS, BDS, BAMS, BSMS, BUMS, BHMS ಸೇರಿದಂತೆ ಇತರೆ ವೈದ್ಯಕೀಯ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ನಡೆಸಲಾಗುತ್ತದೆ. ಈ ಪರೀಕ್ಷೆಯ ರ್ಯಾಂಕಿಂಗ್ ಆಧಾರದ ಮೇಲೆ ಕಾಲೇಜುಗಳಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ. AIIMS, AFMS, JIPMER ಮತ್ತು ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ಸೀಟ್ ನೀಡಲಾಗುತ್ತದೆ.