ಬಂದೂಕು ಠೇವಣಿಯಿಂದ ವಿನಾಯಿತಿ ನೀಡಿ: ಶಿರಾಡಿ ಗಡಿನಾಡ ರಕ್ಷಣಾ ಸೇನೆ ಅಗ್ರಹ

ಶೇರ್ ಮಾಡಿ

ಕಡಬ: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ರೈತರು ತಮ್ಮ ಕೋವಿಗಳನ್ನು ಠೇವಣಿ ಇಡುವುದು ವಾಡಿಕೆಯಾಗಿದ್ದು, ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವ ದೃಷ್ಠಿಯಿಂದ ಕ್ರಿಮಿನಲ್ ಹಿನ್ನೆಲೆಯವರನ್ನು ಹೊರತು ಪಡಿಸಿ ಉಳಿದ ಬಂದೂಕುದಾರರಿಗೆ ಠೇವಣಿಯಿಂದ ರಿಯಾತಿ ನೀಡಬೇಕು ಎಂದು ಶಿರಾಡಿ ಗಡಿನಾಡ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಸಾಜು ಜೇಕಬ್ ಶಿರಾಡಿ ಅಗ್ರಹಿಸಿದರು.

ಅವರು ಶುಕ್ರವಾರ ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ಆನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೈತರು ತಮ್ಮ ಕೃಷಿಯನ್ನು ಕಾಪಾಡಿಕೊಳ್ಳುವ ಉದ್ಧೇಶದಿಂದ ಬಂದೂಕು ಮನೆಯಲ್ಲಿಯೇ ಇರುವ ಅಗತ್ಯತೆಯಿದೆ. ಆದ್ದರಿಂದ ಪೋಲೀಸ್ ಠಾಣೆಯಲ್ಲಿ ಕೋವಿಯನ್ನು ಠೇವಣಾತಿ ಮಾಡುವುದಕ್ಕೆ ವಿನಾಯ್ತಿ ನೀಡಬೇಕು ಎಂದು ಹೇಳಿದರು. ಕಳೆದ ಮೂರು ನಾಲ್ಕು ತಿಂಗಳಲ್ಲಿ ಕಡಬ ತಾಲೂಕಿನಲ್ಲಿ ಆನೆ ದಾಳಿಯಿಂದ ಮೂರು ಜೀವ ಬಲಿಯಾಗಿದೆ, ಪಂಪು ಚಾಲು ಮಾಡಲು ಹೋದಗ ಆನೆ ದಾಳಿ ಮಾಡಿ ತಿಮ್ಮ ಅವರ ಮೃತಪಟ್ಟರೆ ಅವರ ಮಗ ಮರಣಾಂತಿಕ ಗಾಯಗಳಿಂದ ಪಾರಾಗಿದ್ದಾರೆ. ಇತ್ತ ರೆಂಜಲಾಡಿಯಲ್ಲಿ ರಂಜಿತಾ ಹಾಗೂ ರಮೇಶ್ ರೈ ಎಂಬ ಇಬ್ಬರು ಅಮಾಯಕರಿಬ್ಬರನ್ನು ಆನೆ ನಿರ್ದಯವಾಗಿ ಕೊಂದು ಹಾಕಿದೆ. ತಾಲೂಕಿನಲ್ಲಿ ಶೇ 80 ಕೃಷಿಕರಿದ್ದು ಅವರು ವಿದ್ಯುತ್ ಸಮಸ್ಯೆಯ ಹಿನ್ನೆಲೆಯಲ್ಲಿ ರಾತ್ರಿ ತಮ್ಮ ತೋಟಗಳಿಗೆ ನೀರು ಹಾಯಿಸಲು ಹೋಗಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಕೋವಿಯಿಂದ ಶಬ್ದ ಮಾಡಿ ಕಾಡು ಪ್ರಾಣಿಗಳು ದೂರ ಹೋಗುವತೆ ಮಾಡಬೇಕಾದರೆ ಬಂದೂಕು ರೈತರ ಹತ್ತಿರ ಇರಬೇಕಾಗಿದೆ. ಇಲ್ಲಿನ ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ತಿಳಿದಿರುವ ಜಿಲ್ಲಾಧಿಕಾರಿಗಳು ಬಂದೂಕು ಠೇವಣಿಯ ವಿನಾಯಿತಿ ಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದು ಕಾರ್ಯಗತವಾಗಿಲ್ಲ. ಯಾವುದೇ ಠಾಣೆಯಲ್ಲಾಗಲಿ ಅದರ ಬಗ್ಗೆ ಮಾಹಿತಿ ಇಲ್ಲ. ತಹಸೀಲ್ದಾರ್ ಅವರಿಗೂ ಸರಿಯಾದ ಮಾಹಿತಿ ಇಲ್ಲ. ಈಗ 13 ನೇ ತಾರೀಕಿನ ಒಳಗೆ ಎಲ್ಲರೂ ಕೋವಿ ಠೇವಣಿ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಇಲ್ಲಿನ ಕೃಷಿಕರು ಪ್ರಕೃತಿ ವಿಕೋಪದಿಂದ ಕಂಗಾಲಾಗಿ ಹೋಗಿದ್ದಾರೆ. ಉಳಿದ ಕೃಷಿಯನ್ನು ಸಂರಕ್ಷಣೆ ಮಾಡಲಾಗದಿದ್ದರೆ ಉಳಿಗಾಲವಿಲ್ಲ ಎನ್ನುವಂತಾಗಿದೆ. ಹೀಗಾಗಿ ಠಾಣೆಯಲ್ಲಿ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿ ನೀಡಬೇಕು ಎಂದು ಹೇಳಿದ ಸಾಬು ಜೇಕಬ್ ಕೃಷಿಕರಿಗೆ ಅನ್ಯಾಯವಾಗುತ್ತಿದ್ದು ರೈತರ ಸಮಸ್ಯೆಯ ಬಗ್ಗೆ ತಹಸೀಲ್ದಾರರು ತಿಳಿದುಕೊಂಡು ಜಿಲ್ಲಾಧಿಕಾರಿಯವರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಅಗ್ರಹಿಸಿದರು. ಯಾರೆಲ್ಲಾ ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ಪೋಲೀಸ್ ಠಾಣೆಗೆ ಗೊತ್ತಿದೆ. ಅಂತವರ ಕೋವಿಯನ್ನು ತಿ ಪಡೆದು ಈಗಾಗಲೇ ಠೇವಣಿ ಮಾಡಿರುವ ಕೋವಿಗಳನ್ನು ಹಿಂತಿರುಗಿಸಿ ಠೇವಣಿ ಮಾಡದವರಿಗೂ ವಿನಾಯಿತಿ ನೀಡಬೇಕು ಎಂದು ಅಗ್ರಹಿಸಿದರು.
ಗಡಿನಾಡ ರಕ್ಷಣಾ ಸೇನೆಯ ಸದಸ್ಯ ಮನೋಜ್ ಕುನ್ನತ್ ಶಿರಾಡಿ ಮಾತನಾಡಿ ನಾವು ಕಾಡು ಪ್ರಾಣಿಗಳ ಹಾವಳಿಯಿಂದಾಗಿ ನೆಮ್ಮದಿಯಿಂದ ಬದುಕು ಸಾಧಿಸಲು ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ, ಈ ಸಂದರ್ಭದಲ್ಲಿ ಕೃಷಿಕರಿಗೆ ಕೋವಿ ಠೇವಣಿ ಯಿಂದ ವಿನಾಯ್ತಿ ನೀಡದಿದ್ದರೆ ಕೃಷಿ ನಾಶದೊಂದಿಗೆ ಇನ್ನಷ್ಟು ಪ್ರಾಣ ಹಾನಿ ಆಗುವ ಸಂಭವವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಡಿನಾಡ ರಕ್ಷಣಾ ಸೇನೆಯ ಪ್ರಮುಖರಾದ ಜೋಮೊನ್ ಎಂ.ಜೆ ಕಡಬ, ಲವಿನ್ ಪಿ.ಟಿ ಕಡಬ, ಸುವೀಶ್ ಟಿ.ಟಿ ಕಡಬ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!