ಮಂಗಳೂರು: ಪಾರ್ಟ್‌ಟೈಂ ಕೆಲಸದ ಕುರಿತು ಟೆಲಿಗ್ರಾಂ ಖಾತೆಯಲ್ಲಿ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 1,14,901 ರೂ. ಮೋಸ ಹೋಗಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಲ್ಗುಣಿ ಎಂಬ ಹೆಸರಿನಿಂದ ಫೆ. 5ರಂದು ಪಾರ್ಟ್ ಟೈಂ ಕೆಲಸದ ಬಗ್ಗೆ ಸಂದೇಶ ಬಂದಿದ್ದು, ಈ ಕುರಿತು ವಿಚಾರಿಸಿದಾಗ, ಆನ್‌ಲೈನ್ ಮೂವಿ ಟಿಕೆಟ್ ರೇಟಿಂಗ್ ಉದ್ಯೋಗ ಎಂದು ತಿಳಿಸಿದ್ದಾರೆ. ಬಳಿಕ ಲಿಂಕ್ ಕಳುಹಿಸಿ ಆ್ಯಪ್ ಇನ್‌ಸ್ಟಾಲ್ ಮಾಡಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳಬಹುದು ಎಂದು ಆರೋಪಿಗಳು ತಿಳಿಸಿದ್ದಾರೆ.
ಅದರಂತೆ ಫೆ. 6ರಂದು ಲಿಂಕ್ ಕಳುಹಿಸಿದ್ದು, ಅದರಲ್ಲಿದ್ದ ಆ್ಯಪನ್ನು ಮೊಬೈಲ್ ಮೂಲಕ ಇನ್‌ಸ್ಟಾಲ್ ಮಾಡಿ ಖಾತೆಯನ್ನು ತೆರೆದು ವೀಡಿಯೋಗಳನ್ನು ನೋಡಿ ಅದಕ್ಕೆ ರೇಟಿಂಗ್ ನೀಡಿದ್ದಾರೆ. ಆರಂಭದಲ್ಲಿ 1 ಸಾವಿರ ರೂ. ಕಮಿಷನ್ ಲಭಿಸಿದೆ.
ಅನಂತರ ಪಾರ್ಟ್ ಟೈಮ್ ಜಾಬ್ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಬಂದಿದೆ. ಅದರಂತೆ ಅವರು ಕಳುಹಿಸಿದ ಖಾತೆ ಸಂಖ್ಯೆಗೆ ಫೆ.6ರಂದು 10,500 ರೂ. ಪಾವತಿಸಿದ್ದಾರೆ. ಅದೇ ದಿನ ಹೆಚ್ಚಿನ ಕಮಿಷನ್ ಪಡೆಯಬೇಕಾದಲ್ಲಿ 29,936 ರೂ. ಪಾವತಿಸುವಂತೆ ಸಂದೇಶ ಬಂದಿದ್ದು, ಕಮಿಷನ್ ಆಸೆಯಿಂದ ಆ ಮೊತ್ತವನ್ನೂ ಜಮಾ ಮಾಡಿರುತ್ತಾರೆ. ಫೆ. 7ರಂದು ಆ್ಯಪ್ ಮೂಲಕ ವೀಡಿಯೋ ನೋಡಿ ರೇಟಿಂಗ್ ಹಾಕಲು ಪ್ರಯತ್ನಿಸಿದಾಗ ಪುನಃ ಹಣ ಪಾವತಿಸುವಂತೆ ಬೇಡಿಕೆ ಇಟ್ಟಿರುವುದು ಕಂಡು ಬಂದಿದ್ದು, 74,465 ರೂ. ಜಮಾ ಮಾಡಿದ್ದಾರೆ. ಕಮಿಷನ್ ಸೇರಿಸಿ ವಿಡ್ರಾ ಮಾಡಲು ಪ್ರಯತ್ನಿಸಿದಲ್ಲಿ ಪುನಃ ಅಪರಿಚಿತ ವ್ಯಕ್ತಿಗಳು ವೀಡಿಯೋ ನೋಡುವಂತೆಯೂ ಹೆಚ್ಚಿನ ಹಣವನ್ನು ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಅವರಿಗೆ ತಾನು ಮೋಸ ಹೋಗಿರುವುದು ಮನವರಿಕೆಯಾಗಿದೆ.
ಈ ಕುರಿತು ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ಗೆ ಕರೆ ಮಾಡಿ ಸೈಬರ್ ವಂಚನೆಗೆ ಒಳಗಾಗಿರುವ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಅದರಂತೆ ಸೈಬರ್ ಪೋರ್ಟಲ್‌ನಲ್ಲಿ ಪರಿಶೀಲಿಸಿದಾಗ ತಾನು ದಾಖಲಿಸಿದ ದೂರಿಗೆ ಸಂಬಂಧಿಸಿದಂತೆ ತನ್ನ ಖಾತೆಯಿಂದ ಹಂತ ಹಂತವಾಗಿ ವರ್ಗಾವಣೆಯಾದ 1,14,901 ರೂ. ವನ್ನು ಸೈಬರ್ ಕ್ರೈಂ ಪೋರ್ಟಲ್‌ನವರು ತಡೆ ಹಿಡಿದಿರುವುದು ಕಂಡುಬಂದಿದೆ. ಈ ಹಣವನ್ನು ಒದಗಿಸುವಂತೆ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.