SSLC,PUC ನಂತರ ಸರ್ಕಾರಿ ಕೋಟಾದಡಿ ಪ್ಯಾರಾಮೆಡಿಕಲ್ ಕೋರ್ಸ್‌ಗಳ ಸೀಟು ಪಡೆಯುವುದು ಹೇಗೆ?

ಶೇರ್ ಮಾಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾಗಿವೆ. ಈಗ ವಿದ್ಯಾರ್ಥಿಗಳು ಮತ್ತು ಪೋಷಕರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡಬೇಕು ಎನ್ನುವ ಆಸೆ ಇರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಅರೇವೈದ್ಯಕೀಯ ಡಿಪ್ಲೊಮ ಕೋರ್ಸ್‌ಗಳ ಮಾಹಿತಿಯನ್ನಿ ಇಲ್ಲಿ ನೀಡಲಾಗಿದೆ.
ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಪ್ರಾಧಿಕಾರ ಪ್ರತಿ ವರ್ಷ ಅರೆ ವೈದ್ಯಕೀಯ ಕೋರ್ಸ್‌ಗಳಿಗೆ, ಸರ್ಕಾರಿ ವೈದ್ಯಕೀಯ/ ದಂತ ವೈದ್ಯಕೀಯ ಕಾಲೇಜುಗಳು ಹಾಗೂ ಖಾಸಗಿ ಪ್ಯಾರಾ ಮೆಡಿಕಲ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶಾತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತದೆ. ಅರೆವೈದ್ಯಕೀಯ ಡಿಪ್ಲೊಮ ಕೋರ್ಸ್‌ಗಳಿಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆಸ್ಪತ್ರೆ ಹಾಗೂ ರಾಜ್ಯದಲ್ಲಿನ ವಿವಿಧ ಖಾಸಗಿ ಪ್ಯಾರಾ ಮೆಡಿಕಲ್‌ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ನೀವು ಸಹ ಅರ್ಜಿ ಸಲ್ಲಿಸಿ ಸೀಟು ಪಡೆಯಬಹುದಾಗಿದೆ. ಸರ್ಕಾರಿ ಸೀಟು ಸಿಕ್ಕರೆ ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ ಕಡಿಮೆಯಾಗುತ್ತದೆ.

ಅರೆ ವೈದ್ಯಕೀಯ ಕೋರ್ಸ್‌ಗಳ ವಿವರ:
ಡಿಪ್ಲೊಮ ಇನ್‌ ಮೆಡಿಕಲ್ ಲ್ಯಾಬೋರೆಟರಿ ಟೆಕ್ನಾಲಜಿ (DMLT)
ಡಿಪ್ಲೊಮ ಇನ್‌ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (DMIT)
ಡಿಪ್ಲೊಮ ಇನ್‌ ಹೆಲ್ತ್ ಇನ್ಸ್‌ಪೆಕ್ಟರ್ (DHI)
ಡಿಪ್ಲೊಮ ಇನ್‌ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ (DMRT)
ಡಿಪ್ಲೊಮ ಇನ್‌ ಡಯಾಲಿಸಿಸ್‌ ಟೆಕ್ನಾಲಜಿ (DDT)
ಡಿಪ್ಲೊಮ ಇನ್‌ ಆಪರೇಷನ್ ಥಿಯೇಟರ್ ಮತ್ತು
ಅನಸ್ಥೇಶಿಯಾ ಟೆಕ್ನಾಲಜಿ (DOT & AT)
ಡಿಪ್ಲೊಮ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ (DOT)
ಡಿಪ್ಲೊಮ ಇನ್ ಡೆಂಟಲ್ ಮೆಕ್ಯಾನಿಕ್ (DDM)
ಡಿಪ್ಲೊಮ ಇನ್ ಡೆಂಟಲ್ ಹೈಜೀನ್ (DDH)

ಈ ಮೇಲಿನ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ, ಭೌತಶಾಸ್ತ್ರ,ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ ಅಧ್ಯಯನ ಮಾಡಿರಬೇಕು.

ಡಿಪ್ಲೊಮ ಇನ್‌ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ- ಈ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ/ಪಿಸಿಎಂಇ ವಿಷಯಗಳನ್ನು ಅಧ್ಯಯನ ಮಾಡಿರಬೇಕು. ಕಾಮರ್ಸ್‌, ಆರ್ಟ್ಸ್‌ ವಿಷಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸಹ ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ/ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೋರ್ಸ್‌ನ ಅವಧಿ:
ಪಿಯುಸಿ ನಂತರ ಈ ಕೋರ್ಸ್‌ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳು, ಇದರ ಜೊತೆ ಮೂರು ತಿಂಗಳ ಇಂಟರ್‌ನ್‌ಶಿಪ್ ಇರುತ್ತದೆ. ಇನ್ನೂ ಎಸ್‌ಎಸ್‌ಎಲ್‌ಸಿ ನಂತರ ಈ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳು, ಮೂರು ತಿಂಗಳ ಇಂಟರ್‌ನ್‌ಶಿಪ್ ಇರುತ್ತದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಸೇನಾನಿರತ ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು. ಇನ್ನೂ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 1 ರಿಂದ 10ನೇ ತರಗತಿ ಅಥವಾ ಪಿಯುಸಿ ವರೆಗೆ ಕನಿಷ್ಠ ಏಳು ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಇದಕ್ಕೆ ಸಂಬಂಧಿಸಿದ ದೃಢೀಕರಣ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 400 ರೂಪಾಯಿ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ 250 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಇದು 2021-22ರ ಅರ್ಜಿ ಶುಲ್ಕವಾಗಿದ್ದು, ಇದು ಪ್ರತಿ ವರ್ಷ ಪರಿಷ್ಕರಣೆ ಆಗುತ್ತಿರುತ್ತದೆ.
ಅಭ್ಯರ್ಥಿಗಳನ್ನು ಅವರು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಪ್ರವರ್ಗಗಳ ಆಧಾರದ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಅರೆ ವೈದ್ಯಕೀಯ ಕೋರ್ಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್
www.pmbkarnataka.org ಗೆ ಭೇಟಿ ನೀಡಿ.

Leave a Reply

error: Content is protected !!