ಮಣಿಪಾಲ: ರಸ್ತೆ ಅಪಘಾತದಿಂದಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿ ಅಂಗಾಂಗ ದಾನದ ಮೂಲಕ ಸಾರ್ಥಕ್ಯ ಮೆರೆದಿದ್ದಾರೆ. ಪರಿಣಾಮ 7 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಭದ್ರಾವತಿ ಮೂಲದ ಉಲ್ಲಾಸ್ ಆರ್.(21)ಅವರಿಗೆ ಎ.22ರಂದು ಅಪರಾಹ್ನ ಭದ್ರಾವತಿ ತಾಲೂಕಿನ ಚೆನ್ನಗಿರಿ ರಸ್ತೆಯಲ್ಲಿ ಅಪಘಾತವಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎ.23ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಬಳಿಕ ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು.
ಬಳಿಕ ಉಲ್ಲಾಸ್ ಅವರ ತಂದೆ ರಾಜಪ್ಪ ಮತ್ತು ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ದಾನ ಮಾಡಿದ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು, ಮತ್ತು ಎರಡು ಕಾರ್ನಿಯಾಗಳು 7 ಜನರ ಜೀವ ಉಳಿಸಲು ಸಹಾಯವಾಗಿದೆ.
ರೋಗಿಗಳಿಗೆ ಬಳಕೆ
ಶ್ವಾಸಕೋಶಗಳನ್ನು ಚೆನ್ನೈಯ ಅಪೊಲೊ ಆಸ್ಪತ್ರೆಗೆ, ಯಕೃತ್ ಅನ್ನು ಅಸ್ಟರ್ ಬೆಂಗಳೂರಿನ ಸಿಎಂಐ ಆಸ್ಪತ್ರೆಗೆ, ಮೂತ್ರಪಿಂಡವನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಮತ್ತು ಕಾರ್ನಿಯಾಗಳು ಹಾಗೂ ಮೂತ್ರಪಿಂಡವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.
ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದ.ಕ. ಪೊಲೀಸ್ ಇಲಾಖೆಯ ನೆರವಿನೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.