ಅರುಣ್‌ ಕುಮಾರ್‌ ಪುತ್ತಿಲರ ಬಗ್ಗೆ ಡಾ|ಪ್ರಸಾದ್‌ ಭಂಡಾರಿ ಹೇಳಿದ್ದೇನು

ಶೇರ್ ಮಾಡಿ

ಪುತ್ತೂರು : ಪಕ್ಷೇತರನಾಗಿ ಕಣಕ್ಕಿಳಿದಿರುವ ಅರುಣ್‌ ಕುಮಾರ್‌ ಪುತ್ತಿಲ ಅವರು ಒಂದು ಚುನಾವಣೆ ಹೊರತುಪಡಿಸಿ ಉಳಿದ ಯಾವುದೇ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿಯೇ ಇಲ್ಲ. ಅವರು ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದು ಎಂದು ಹಿಂದೂ ಸಂಘಟನೆಯ ಮುಖಂಡ ಡಾ|ಎಂ.ಕೆ.ಪ್ರಸಾದ್‌ ಭಂಡಾರಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ನಾಯಕ ಅನ್ನುವುದೇ ದೊಡ್ಡ ಹುದ್ದೆ. ಅಂತಹವರಿಗೆ ಶಾಸಕನಾಗುವ ಆಸೆ ಏಕೆ ಎಂದು ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್‌, ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅದೆಷ್ಟೋ ಮಹನೀಯರು ಯಾವುದೇ ಹುದ್ದೆಗೆ ಆಸೆ ಪಡದೇ, ಕೆಲಸ ಮಾಡಿದ್ದಾರೆ. ಆದರೆ ಅರುಣ್‌ ಪುತ್ತಿಲ ಅಧಿಕಾರಕ್ಕಾಗಿ ಆಸೆ ಹೊಂದಿರುವ ಸ್ವಾರ್ಥಿ ಎಂದು ವಾಗ್ದಾಳಿ ನಡೆಸಿದರು.

ಪುತ್ತೂರು ಬಿಜೆಪಿಯ ಕಚೆೇರಿಗೇ ಬಾರದೇ, ಬಿಜೆಪಿಯ ಮುಖಂಡರನ್ನು ಸಂಪರ್ಕಿಸದೇ ತನಗೆ ಶಾಸಕ ಸ್ಥಾನದ ಟಿಕೆಟ್‌ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದ. ಅರುಣ್‌ ಕುಮಾರ್‌ ಪುತ್ತಿಲ ಈ ಹಿಂದೆ ಬಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದರು. ಅವರ ನಡವಳಿಕೆಯಿಂದಾಗಿ ಅವರಾಗಿಯೇ ಪರಿವಾರ ಸಂಘಟನೆಯಿಂದ ಹೊರ ನಡೆದರು. ನಂತರ ಪ್ರಮೋದ್‌ ಮುತಾಲಿಕರೊಂದಿಗೆ ಕೈ ಜೋಡಿಸಿ ಶ್ರೀರಾಮ ಸೇನೆಯ ಸಂಚಾಲಕರಾದರು. ಶ್ರೀರಾಮ ಸೇನೆಯಿಂದ ಹೊರ ಬಂದು, ತನ್ನದೇ ಹಿಂದೂ ಸೇನೆ ರಚಿಸಿ ಅದನ್ನು ಸಹ ಅರ್ಧದಲ್ಲೇ ಕೈ ಬಿಟ್ಟರು ಎಂದರು.

2013ರಲ್ಲಿ ಸಂಘ ಪರಿವಾರದ ಹಿರಿಯರು ಬಿಜೆಪಿಯಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳಿದಾಗ ತನಗೆ ಅಧ್ಯಕ್ಷ ಸ್ಥಾನವನ್ನೇ ಕೊಡಬೇಕೆಂದು ಹಠ ಹಿಡಿದ ಕಾರಣದಿಂದ ಬಿಜೆಪಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ತಾನಾಗಿಯೇ ಕೈ ಚೆಲ್ಲಿದರು. ಸಂಘದ ಹಿರಿಯರು ಬಿಜೆಪಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸೂಚಿಸಿದರೂ ಪಕ್ಷಕ್ಕೆ ಬರಲಿಲ್ಲ. ಆದರೂ ಸಂಘ ಪರಿವಾರದ ಹಿರಿಯರು ಪುತ್ತಿಲರನ್ನು ಕಡೆಗಣಿಸದೇ, ಸಂಘಟನೆಯಲ್ಲಿ ಕೆಲಸ ಮಾಡುವ ಸಲುವಾಗಿ ನಮೋ ಬ್ರಿಗೇಡ್‌ನ‌ ನೇತೃತ್ವವನ್ನು ನೀಡಿದರು. ನಮೋ ಬ್ರಿಗೇಡ್‌ನ‌ಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದು ಬಿಟ್ಟರೆ ಉಳಿದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಶಕುಂತಳಾ ಶೆಟ್ಟಿ ಅವರೊಂದಿಗೆ ಕೆಲಸ ಮಾಡಿ ಬಿಜೆಪಿಗೆ ವಿರುದ್ಧವಾಗಿ ಸಂಚು ರೂಪಿಸಿದ್ದು ಅರುಣ್‌ ಪುತ್ತಿಲ. ನಂತರದ ಚುನಾವಣೆಗಳಾದ 2013, 2018ರ ಚುನಾವಣೆಗಳಲ್ಲಿಯೂ ಪಕ್ಷದ ವಿರುದ್ಧ ಬಂಡಾಯವೆದ್ದು ತಾನು ಮತ್ತು ತನ್ನ ಬಳಗ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಬಿಜೆಪಿಗೆ ವಿರುದ್ಧವಾಗಿ ಕೆಲಸ ಮಾಡಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನ ಮಾಡಿದ್ದಾರೆ. ಈಗಲೂ ಬಿಜೆಪಿಯ ಮತಗಳನ್ನು ಹಾಳು ಮಾಡಲು, ಕಾಂಗ್ರೆಸ್‌ ನೊಂದಿಗೆ ಕೈ ಜೋಡಿಸಿದ್ದಾರೆ ಎನ್ನುವ ಮಾಹಿತಿ ಇದೆ ಎಂದರು.
ಶಾಸಕನಾಗುವ ವ್ಯಕ್ತಿಯಲ್ಲಿ ಶಾಂತ ಸ್ವಭಾವ ಇರಬೇಕು. ಸಾರ್ವಜನಿಕರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸಬೇಕು. ಆ ಯಾವುದೇ ಅರ್ಹತೆ ಅರುಣ್‌ ಪುತ್ತಿಲ ಅವರ ಬಳಿ ಇಲ್ಲ. ಹಾಗಾಗಿ ಅವರು ಶಾಸಕ ಸ್ಥಾನ ಅಭ್ಯರ್ಥಿತನಕ್ಕೆ ಯೋಗ್ಯ ವ್ಯಕ್ತಿ ಅಲ್ಲ. ಬಿಜೆಪಿ ಆಯ್ಕೆ ಮಾಡಿರುವ ಆಶಾ ತಿಮ್ಮಪ್ಪ ಗೌಡ ಅರ್ಹ ಅಭ್ಯರ್ಥಿ ಎಂದು ಪ್ರಸಾದ್‌ ಭಂಡಾರಿ ಹೇಳಿದರು.

See also  ಬದ್ರಿಯಾ ಜುಮ್ಮಾ ಮಸೀದಿ ಕೊಕ್ಕಡ ಹಾಗೂ SKSSF ಈ ಕೊಕ್ಕಡ ವಿಖಾಯ ಟೀಮ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಅರುಣ್‌ ಪುತ್ತಿಲ ಅವರ ವಿರುದ್ಧ ಹಲವಾರು ಆಪಾದನೆಗಳು ಕೇಳಿ ಬಂದಿವೆ. ಶನಿ ಪೂಜೆಯ ಸಂದರ್ಭದಲ್ಲಿ ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸಮಯದಲ್ಲಿ, ಅನುಮತಿ ಇಲ್ಲದೇ ಮೆರವಣಿಗೆ ಮಾಡುವ ಪ್ರಯತ್ನ ಮಾಡಿ ಸಾಕಷ್ಟು ಕಾರ್ಯಕರ್ತರು ತೊಂದರೆಗೊಳಗಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರು ಆಡಳಿತ ವಹಿಸಿಕೊಂಡಿದ್ದ ಹಲವು ದೇವಾಲಯಗಳಲ್ಲಿ ಹಣಕಾಸಿನ ವಿಚಾರವಾಗಿ ಆಪಾದನೆಗಳು ಕೇಳಿ ಬಂದಿರುತ್ತವೆ. ಧಾರ್ಮಿಕ ಕೇಂದ್ರವಾದ ದೇವಸ್ಥಾನದಲ್ಲಿಯೇ ಹಿಂದೂ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಅವರ ವಿರುದ್ಧ ಇದೆ ಎಂದು ಡಾ|ಎಂ.ಕೆ. ಪ್ರಸಾದ್‌ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಂಭು ಭಟ್‌, ರಾಜೇಶ್‌ ಬನ್ನೂರು, ಸಹಜ್‌ ರೈ ಬಳಜ್ಜ, ಚಂದ್ರಶೇಖರ್‌ ರಾವ್‌ ಬಪ್ಪಳಿಗೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!