ಪುತ್ತಿಲ ವಿರುದ್ಧ ಹರಿಹಾಯ್ದ ಕಲ್ಲಡ್ಕ ಪ್ರಭಾಕರ ಭಟ್‌

ಶೇರ್ ಮಾಡಿ

ಮಂಗಳೂರು: ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಬಿಜೆಪಿ ಬಿಟ್ಟರೆ ಬೇರೆ ಅಸ್ತಿತ್ವವೇ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಟಿಕೆಟ್‌ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಂಡಾಯವಾಗಿ ಕಣಕ್ಕಿಳಿದಿರುವ, ಹಿಂದು ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಅರುಣ್‌ ಕುಮಾರ್‌ ಪುತ್ತಿಲ ಅವರ ವಿರುದ್ಧ ಹರಿಹಾಯ್ದರು.

ʻʻಬಿಜೆಪಿ ಸದಸ್ಯರು ಯಾರಾದ್ರೂ ತಪ್ಪು ಮಾಡಿದ್ರೆ ಅವ್ರನ್ನ ಕೇಳೋರು ಇದ್ದಾರೆ. ತಪ್ಪಾಗಿದ್ರೆ ಅವರನ್ನು ತಿದ್ದಿ ಸರಿಯಾಗಿ ಹೋಗು ಅಂತ ಹೇಳುವುದಕ್ಕೆ ಪಕ್ಷ ಇದೆ. ಆದರೆ ಸ್ವತಂತ್ರ ಅಭ್ಯರ್ಥಿಯನ್ನು ಪ್ರಶ್ನೆ ಮಾಡೋಕೆ ಯಾರಿದ್ದಾರೆ..? ಸ್ವತಂತ್ರವಾಗಿ ಇರುವವರಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲʼʼ ಎಂದು ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

ʻʻನೀವು ಈಗ್ಲೇ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದೀರಿ. ಮುಂದೆ ಹೇಗೆ ಅನ್ನೋದು ಈಗಲೇ ಗೊತ್ತಾಗುತ್ತಿದೆ. ಬಿಜೆಪಿಯ ಹಿಂದುತ್ವ ದೊಡ್ಡದಾ? ಸಂಘದ ಹಿಂದುತ್ವ‌ ದೊಡ್ಡದಾ ಅಥವಾ ವ್ಯಕ್ತಿಯ ಹಿಂದುತ್ವ ದೊಡ್ಡದಾ? 70 ವರ್ಷಗಳಿಂದ ಬಲಿದಾನ ಮಾಡಿ ರಕ್ತವನ್ನು ಚೆಲ್ಲಿ ಕಟ್ಟಿದ್ದು ಹಿಂದುತ್ವನಾ? ಹಲವೆಡೆ ಭಾಷಣ ಮಾಡಿದಂತ ಹಿಂದುತ್ವನಾ..? ಯಾವುದು ಹಿಂದುತ್ವ ಅಂತ ಆಗ್ಬೇಕು. ಹಿಂದುತ್ವದ ನಿಜವಾದ ಅರ್ಥದಲ್ಲಿ ಇರೋದು ಬಿಜೆಪಿ ಮಾತ್ರ. ಬಿಜೆಪಿ ಪಕ್ಷವನ್ನು ಬೆಂಬಲಿಸಿದರೆ ಮಾತ್ರ ಅದು ಪುಣ್ಯದ ಕೆಲಸ, ಇಲ್ಲಂದ್ರೆ ಪಾಪದ ಕೆಲಸʼʼ ಎಂದು ಪುತ್ತಿಲ ಅವರ ನಿಲುವನ್ನು ಖಂಡಿಸಿದರು ಪ್ರಭಾಕರ ಭಟ್‌.

ಕಾಂಗ್ರೆಸ್‌ ವಿರುದ್ಧವೂ ಕಿಡಿಕಾರಿದ ಪ್ರಭಾಕರ ಭಟ್‌
ʻʻಅಧಿಕಾರಕ್ಕೆ ಬಂದರೆ ಒಂದು‌ ದಿನದಲ್ಲಿ ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡಿತೀವಿ ಅಂತ ಕಾಂಗ್ರೆಸ್‌ನವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇದೆಂತ ದ್ರೋಹ, ತಾಯಿಗೆ ದ್ರೋಹ ಮಾಡಿದ ಹಾಗೆ. ಮತ್ತೆ ಮತಾಂತರ ನಿಷೇಧ ಕಾನೂನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ. ಹೀಗೆಲ್ಲ ಆದರೆ ನಾಳೆ ನಮ್ಮ‌ ಮಕ್ಕಳು ಹಿಂದೂಗಳಾಗಿ ಉಳಿತಾರಾ ಅಂತ ಯೋಚನೆ ಮಾಡಿದ್ದಾರಾ ಕಾಂಗ್ರೆಸ್‌ನವರು?ʼʼ ಎಂದು ಕಲ್ಲಡ್ಕ ಪ್ರಭಾಕರ ಭಟ್‌ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.
ʻʻಇನ್ನು ಮುಸಲ್ಮಾನರ ಮೀಸಲಾತಿಯನ್ನು ಮತ್ತೆ ಮುಸಲ್ಮಾನರಿಗೆ ಸಿಗುವಂತೆ ಮಾಡ್ತೇವೆ ಎಂದಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ನವ್ರು ಮುಸಲ್ಮಾನರನ್ನು ಬೆಳೆಸೋದು ಮಾತ್ರವೇ?ʼʼ ಎಂದು ಪ್ರಶ್ನಿಸಿದ ಅವರು, ಬಜರಂಗ ದಳವನ್ನು ಬ್ಯಾನ್ ಮಾಡೋ ತಾಕತ್ ಕಾಂಗ್ರೆಸ್ ಗೆ ಇದ್ಯಾ? ಇದು ನಿಮ್ಮಿಂದ ಸಾಧ್ಯನಾ ಕಾಂಗ್ರೆಸ್ಸಿಗರೇ? ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾಗಿರುವ ಕಲ್ಲಡ್ಕ ಪ್ರಭಾಕರ ಭಟ್‌ ಸವಾಲು ಹಾಕಿದರು.
ʻʻಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನೆಲ್ಲ ಬ್ಯಾನ್ ಮಾಡ್ತೀವಿ ಅಂತಾರೆ. ಹಾಗಾದ್ರೆ ಕಾಂಗ್ರೆಸ್ ಇರೋದು ಹಿಂದೂಗಳಿಗೆ ಅನ್ಯಾಯ ಮಾಡೋದಕ್ಕೆನಾ?ʼʼ ಎಂದು ಪ್ರಶ್ನಿಸಿದ ಅವರು, ಆದರೆ ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದರು.

Leave a Reply

error: Content is protected !!