ಮತದಾನ ನಮ್ಮ ಹಕ್ಕು, ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಕರೆ

ಶೇರ್ ಮಾಡಿ

ಮಂಗಳೂರು: ಮತದಾನ ಪವಿತ್ರವಾದ ಹಕ್ಕು. ಮೇ 10ರಂದು ಮಂಗಳೂರು ನಗರದ ಮತದಾರರೆಲ್ಲರೂ ತಮ್ಮ ಸಮೀಪದ ಮತಗಟ್ಟೆಗೆ ಬಂದು ಈ ಹಕ್ಕನ್ನು ಚಲಾಯಿಸಿ, ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಕರೆ ನೀಡಿದ್ದಾರೆ.

ಅವರು ಶನಿವಾರ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಮತದಾನದ ಜಾಗೃತಿಗಾಗಿ ಮೇ 10 – ವೋಟು ಒತ್ತು ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮೇ 10ರಂದು ಅರ್ಹರೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಅರ್ಹ ಅಭ್ಯರ್ಥಿ ಗೆದ್ದ ನಂತರ ಅಗತ್ಯ ನಾಗರೀಕ ಸೌಲಭ್ಯಗಳಿಗಾಗಿ ಅವರನ್ನು ಕೇಳುವ ಹಕ್ಕು ಪಡೆಯುತ್ತೀರಿ, ಜೊತೆಗೆ ವಿಧಾನಸೌಧದಲ್ಲಿ ಜಿಲ್ಲೆ ಅಥವಾ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಮೇ 10 ಅತ್ಯಮೂಲ್ಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ದಿನವಾಗಿದ್ದು ಅದರ ಹಿನ್ನೆಲೆಯಲ್ಲಿ ಮೇ 10 ವೋಟು ಒತ್ತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಶೇಕಡಾ ನೂರರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನವಾದ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆಯಲು ಅರ್ಹರೆಲ್ಲರೂ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು

ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ.ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಚೆನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಕೆ ಎಚ್, ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕಿಶೋರ್ ಕುಮಾರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಸೇರಿದಂತೆ ಬೆಸೆಂಟ್, ಬಲ್ಮಠ, ರಥಭೀದಿ ಹಾಗೂ ಹಂಪನಕಟ್ಟೆ ವಿಶ್ವವಿದ್ಯಾಲಯದ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿಯಿಂದ ಹೊರಟ ಜಾಥಾವು ಮೀನು ಮಾರುಕಟ್ಟೆಯಲ್ಲಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿತು. ರಥಬೀದಿಯವರೆಗೆ ಸಾಗಿ ಕೊನೆಗೊಂಡಿತು.

Leave a Reply

error: Content is protected !!