ಸುಳ್ಯ: ಕಾಡುಕೋಣವೊಂದು ತೋಟವೊಂದಕ್ಕೆ ಬಂದು ಮರಳಿ ಹೋಗುತ್ತಿದ್ದ ವೇಳೆ ತೋಟದಿಂದ ಆನೆಕಂದಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡೆಕೋಲು ಗ್ರಾಮದ ಕೇನಾಜೆಯಲ್ಲಿ ನಡೆದಿದೆ.
ಕೇನಾಜೆ ಕುಸುಮಾಧರ ಮಾವಜಿಯವರ ತೋಟದಲ್ಲಿ ಸಂಜೆ ಸುಮಾರು 5.30 ರ ವೇಳೆಗೆ ಕಾಡುಕೋಣವೊಂದಿತ್ತು. ಅದು ತೋಟದಿಂದ ಕಾಡಿಗೆ ಹೋಗುತ್ತಿದ್ದ ವೇಳೆಗೆ ಕುಸುಮಾಧರ ಅವರ ತೋಟ ಮತ್ತು ಕಾಡಿನ ಮಧ್ಯೆ ಮಾಡಲಾಗಿದ್ದ ಆನೆ ಕಂದಕವನ್ನು ಹಾರಿದೆ.
ಈ ವೇಳೆ ಆಯತಪ್ಪಿ ಕಾಡುಕೋಣವು ಆನೆ ಕಂದಕಕ್ಕೆ ಬಿದ್ದು, ಅದರ ಕಾಲುಗಳು ಕಂದಕದಲ್ಲಿದ್ದ ಕೆಸರಿನಲ್ಲಿ ಹೂತು ಹೋಗಿತ್ತು. ಮುಖ ಕೂಡಾ ಗುದ್ದಿ ನಿಂತಿತು. ಅದು ಒದ್ದಾಡಿದರೂ ಮೇಲೆ ಏಳಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.