ನೆಲ್ಯಾಡಿ: ಅಡ್ಡಹೊಳೆಯಿಂದ ಬಿಸಿ ರೋಡಿನವರೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು. ಕಾಮಗಾರಿಯಿಂದಾಗಿ ಸಾರ್ವಜನಿಕರು, ವಾಹನ ಸವಾರರು, ವ್ಯಾಪಾರಸ್ಥರು ತೀರಾ ಸಂಕಷ್ಟವನ್ನು ಎದುರಿಸುವಂತಾಗಿದೆ.
ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪೆನಿಯು ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ನಿರ್ವಹಿಸದೆ, ಅಲ್ಲಲ್ಲಿ ಬೇಕಾಬಿಟ್ಟಿ ಕೆಲಸವನ್ನು ನಿರ್ವಹಿಸಿ. ಗುತ್ತಿಗೆದಾರರು ಅವರಿಗೆ ಬೇಕಾದ ಹಾಗೆ ಕೆಲಸ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಇದೀಗ ಮಳೆ ಆರಂಭವಾಗಿದ್ದು, ಮೇ 11ರಂದು ಸುರಿದ ಭಾರಿ ಮಳೆಗೆ ಪೆರಿಯಶಾಂತಿಯ ಬಳಿ ರಸ್ತೆಯ ಎರಡು ಬದಿಗಳಲ್ಲಿ ಕುಸಿತ ಉಂಟಾಗಿ, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿ ಸುಮಾರು ಎರಡೂವರೆ ತಾಸುಗಳಷ್ಟು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.
ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆಯೂ ಮಳೆ ಬಂದಾಗ ಸಮಸ್ಯೆ ತೀವ್ರ ರೀತಿಯಲ್ಲಿ ತೊಂದರೆಯಾದಿತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ನೆಲ್ಯಾಡಿ ಹೊರಠಾಣೆಯ ಪೊಲೀಸ್ ಸಿಬಂದಿಗಳಾದ ಕುಶಾಲಪ್ಪ ನಾಯ್ಕ, ಬಾಲಕೃಷ್ಣ ಮೊದಲಾದವರು ಸ್ಥಳಕ್ಕೆ ಆಗಮಿಸಿ, ಹಿಟಾಚಿ ಯಂತ್ರವನ್ನು ಸ್ಥಳಕ್ಕೆ ತರಿಸಿ ವಾಹನ ಸಂಚಾರಕ್ಕೆ ಬೇಕಾದಂತಹ ವ್ಯವಸ್ಥೆಯನ್ನು ಕಲ್ಪಿಸಿದರು.
ಮಳೆಗಾಲ ಆರಂಭವಾಗಿರುವುದರಿಂದ ಅನೇಕ ಕಡೆಗಳಲ್ಲಿ ಈ ರೀತಿಯ ತೊಂದರೆಗಳಾಗುವ ಸಂಭವ ಹೆಚ್ಚಿರುವುದರಿಂದ, ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಹಾಗೂ ಗುತ್ತಿಗೆದಾರರು ಎಚ್ಚರ ವಹಿಸುವುದು ಅನಿವಾರ್ಯವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.