ಬೆಂಗಳೂರು: ಸಿಇಟಿ-2023ಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟಕಡೆಯ ಅವಕಾಶ ನೀಡಿದೆ.
ಕೆಇಎ ಕಾಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು 2023ರ ಮೇ 21ರ ಸಂಜೆ 6.00ರಿಂದ 2023ರ ಮೇ 24ರ ರಾತ್ರಿ 11.59ರ ವರೆಗೆ ಮಾಹಿತಿ ತಿದ್ದುಪಡಿ ಮಾಡಬಹುದು. ಸಿಇಟಿ-2023ರ ಫಲಿತಾಂಶ ಪ್ರಕಟಿಸುವ ಮುನ್ನ ಇದು ತಿದ್ದುಪಡಿಗೆ ಕೊನೆಯ ಅವಕಾಶ ಎಂದವರು ಸ್ಪಷ್ಟಪಡಿಸಿದ್ದಾರೆ.
ಸಿಇಟಿ-2023ರ ಫಲಿತಾಂಶ ಘೋಷಣೆಯಾದ ಮೇಲೆ ಯಾವುದೇ ಕಾರಣಕ್ಕೂ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಅಥವಾ ಮೀಸಲಾತಿ ಕ್ಲೈಮ್ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಮತ್ತು ಪೋಷಕರು ತಮಗೆ ಸಂಬಂಧಿಸಿದ ಅರ್ಜಿಗಳಲ್ಲಿ ಮಾಡಿರುವ ಕ್ಲೈಮ್/ ಮಾಹಿತಿಯನ್ನು ತಪ್ಪದೆ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ವಿವರಕ್ಕೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನೋಡಬಹುದು.