ಆ್ಯಂಬ್ಯುಲೆನ್ಸ್‌ ನೀಡದ ಆಸ್ಪತ್ರೆ ; ಮಗಳ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ತಂದೆ

ಶೇರ್ ಮಾಡಿ

ಭೋಪಾಲ್:‌ ತೀರಿಹೋದ ಮಗನ ಮೃತದೇಹವನ್ನು ಮನೆಗೆ ತರಲು ಆ್ಯಂಬ್ಯುಲೆನ್ಸ್ ನವರು ಹೆಚ್ಚು ಹಣ ಕೇಳಿದಕ್ಕೆ ತಂದೆಯೊಬ್ಬ ಮೃತದೇಹವನ್ನು ಬ್ಯಾಗ್‌ ನಲ್ಲಿ ಹಾಕಿ ಮನೆಗೆ ತಂದ ಪಶ್ಚಿಮ ಬಂಗಾಳದ ಸುದ್ದಿ ಪ್ರಚಲಿತದಲ್ಲಿರುವಾಗಲೇ ಅಂಥದ್ದೇ ಹೃದಯ ವಿದ್ರಾವಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಎಂಬುವರ ಮಗಳು ಮಾಧುರಿ (13) ಯನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತು. ರಕ್ತಹೀನತೆಯಿಂದ ಆಕೆ ಮೃತಪಟ್ಟಿದ್ದಾಳೆ. ಗ್ರಾಮದಿಂದ 70 ಕಿ.ಮೀ ದೂರದಲ್ಲಿರುವ ಶಹದೋಲ್‌ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದು ಮಗಳ ಮೃತದೇಹವನ್ನು ಊರಿಗೆ ಕರೆತರಲು ಲಕ್ಷ್ಮಣ್‌ ಸಿಂಗ್ ಆ್ಯಂಬ್ಯುಲೆನ್ಸ್‌ ವ್ಯವಸ್ಥೆಯನ್ನು ಕೇಳಿದ್ದಾರೆ. ಆದರೆ ಆಸ್ಪತ್ರೆಯವರು 15 ಕಿ.ಮೀಕ್ಕಿಂತ ದೂರದ ಪ್ರದೇಶಕ್ಕೆ ಆ್ಯಂಬ್ಯುಲೆನ್ಸ್ ಇಲ್ಲ ಎಂದು ಹೇಳಿದ್ದಾರೆ.

ಖಾಸಗಿ ಆ್ಯಂಬ್ಯುಲೆನ್ಸ್‌ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಮಗಳ ಮೃತದೇಹವನ್ನು ಬೈಕ್‌ ನಲ್ಲಿ ಹಿಡಿದುಕೊಂಡು ಬಂದಿದ್ದೇವೆ ಎಂದು ತಂದೆ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

ಇನ್ನೇನು ಊರಿಗೆ ತಲುಪಲು 20 ಕಿ.ಮೀ ದೂರವಿರುವಾಗ ಬೇರೊಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಹದೋಲ್‌ ನ ಜಿಲ್ಲಾಧಿಕಾರಿ ವಂದನಾ ವೈದ್ಯ ಅವರು ಬೈಕ್‌ ನಲ್ಲಿ ಹೋಗುತ್ತಿದ್ದವರನ್ನು ತಡೆದು ಕೂಡಲೇ ವಾಹನದ ವ್ಯವಸ್ಥೆ ಮಾಡಿಸಿ, ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮೃತ ಯುವತಿಯ ಕುಟುಂಬಕ್ಕೆ ಆರ್ಥಿಕವಾಗಿ ಜಿಲ್ಲಾಧಿಕಾರಿಗಳು ನೆರವಾಗಿದ್ದಾರೆ ಎಂದು ವರದಿ ಹೇಳಿದೆ.

Leave a Reply

error: Content is protected !!