ಸಿದ್ದರಾಮಯ್ಯಗೆ ಸಿ ಎಂ ಪಟ್ಟ?; ಗುರುವಾರ ಪ್ರಮಾಣ ವಚನ?

ಶೇರ್ ಮಾಡಿ

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕರ್ನಾಟಕದ ನೂತನ ಸಿಎಂ ಆಯ್ಕೆಯ ಕಸರತ್ತು ಅಂತಿಮ ಹಂತಕ್ಕೆ ಬಂದಿದೆ. ಬಹುತೇಕ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕರ್ನಾಟಕದ ನೂತನ ಸಿಎಂ ಆಗುವುದು ಖಚಿತವಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಸಿಎಂ ರೇಸ್‌ನಲ್ಲಿದ್ದ ಡಿಕೆ ಶಿವಕುಮಾರ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜೊತೆ ಪ್ರಭಾವಿ ಖಾತೆಗಳನ್ನು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ದಿಲ್ಲಿಯ ರಾಹುಲ್‌ ಗಾಂಧಿ ಅವರ 10 ಜನಪಥ್‌ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ರಾಹುಲ್‌ ಗಾಂಧಿ ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಜೊತೆಗೂ ರಾಹುಲ್‌ ಗಾಂಧಿ ಮಾತುಕತೆ ನಡೆಸುತ್ತಿದ್ದು, ಸಂಜೆ ವೇಳೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡಲಿದ್ದಾರೆ. ರಾಹುಲ್‌ ಗಾಂಧಿ ಸಿದ್ದರಾಮಯ್ಯ ಅವರಿಗೆ ಆಲ್‌ ದಿ ಬೆಸ್ಟ್‌, ಸಿಎಂ ಹುದ್ದೆಯನ್ನು ಚೆನ್ನಾಗಿ ನಿಭಾಯಿಸಿ ಎಂದು ಹೇಳಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ನಡುವೆ ಶಿಮ್ಲಾದಲ್ಲಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ದಿಲ್ಲಿಗೆ ಆಗಮಿಸಲಿದ್ದು, ಹೊಸ ಸಿಎಂ ಘೋಷಣೆಗೆ ಗ್ರೀನ್‌ ಸಿಗ್ನಲ್‌ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಸಿದ್ದರಾಮಯ್ಯ ಅವರು ಸಿಎಂ ಆಗುವುದ ಬಹುತೇಕ ಖಚಿತವಾದಂತೆ ಸಿದ್ದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಸಿದ್ದರಾಮಯ್ಯ ಅವರ ಕುಮಾರಕೃಪಾ ನಿವಾಸದ ಬಳಿ ಸಂಭ್ರಮಾಚರಣೆ ನಡೆಯುತ್ತಿದೆ. ಆದ್ದರಿಂದ, ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರು ಫೈನಲ್‌ ಆಗಿದೆ. ಸಂಜೆ ಹೊತ್ತಿಗೆ ಅಧಿಕೃತ ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿದ್ದಾರೆ. ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಕನ್ಫರ್ಮ್ ಆಗಿದೆ ಎಂದು ಪುಷ್ಪಾ ಅಮರ್‌ನಾಥ್‌ ಹೇಳಿದ್ದಾರೆ.
ಡಿಕೆ ಶಿವಕುಮಾರ್‌ಗೆ ಡಿಸಿಎಂ ಪಟ್ಟ?
ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗುವುದು ಎಂದು ತಿಳಿದುಬಂದಿದೆ. ಅದರ ಜೊತೆ ಪ್ರಮುಖ ಖಾತೆಗಳನ್ನು ಡಿಕೆಶಿಗೆ ನೀಡುವ ಸಾಧ್ಯತೆ ಇದೆ. ಸಿಎಂ ಸ್ಥಾನ ನೀಡದಿದ್ದರೆ, ನನಗೆ ಯಾವುದೇ ಸ್ಥಾನ ಬೇಡ. ನಾನು ಸರ್ಕಾರದ ಭಾಗವಾಗುವುದಿಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದ್ದರು. ಆದರೆ, ಈಗ ಡಿಕೆಶಿ ಅವರನ್ನು ಹೈಕಮಾಂಡ್‌ ಮನವೊಲಿಸಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ಪ್ರಮಾಣ ವಚನ?
ಗುರುವಾರ ಮಧ್ಯಾಹ್ನ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಕಳೆದ ಬಾರಿಯಂತೆ ಕಂಠೀರವ ಮೈದಾನದಲ್ಲಿ ಸಿದ್ದರಾಮಯ್ಯ ಪದಗ್ರಹಣ ಮಾಡುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಜೊತೆ ಡಿ ಕೆ ಶಿವಕುಮಾರ್‌ ಕೂಡ ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!