ಮರ್ಧಾಳ: ರಸ್ತೆಗೆ ಮೋರಿ ಅಳವಡಿಕೆ; ಕಾಮಗಾರಿ ಅರ್ಧದಲ್ಲೇ ಬಿಟ್ಟು ಹೋದ ಗುತ್ತಿಗೆದಾರ; ವಾಹನ ಸಂಚಾರಕ್ಕೆ ಅಡಚಣೆ

ಶೇರ್ ಮಾಡಿ

ಕಡಬ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮರ್ಧಾಳ ಸಮೀಪದ ನೆಕ್ಕಿತಡ್ಕ ಎಂಬಲ್ಲಿ ರಸ್ತೆಗೆ ಮೋರಿ ಅಳವಡಿಸಲು ಪ್ರಾರಂಭಿಸಿ ಎರಡು ತಿಂಗಳಾದರೂ ಕಾಮಗಾರಿ ಮುಗಿಯದೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಲೇ ಇದೆ.

ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸಾರ್ವಜನಿಕರು ರಸ್ತೆಗೆ ಚಿಕ್ಕ ಪೈಪ್ ಅಳವಡಿಸಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ, ದೊಡ್ಡದಾದ ಮೋರಿ ಅಳವಡಿಸುವಂತೆ ಕೇಳಿಕೊಂಡಿದ್ದರು. ದೂರಿನ ಮೇರೆಗೆ ಸ್ಪಂದಿಸಿದ ಇಲಾಖಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಕಳಿಸಿ, ಮಳೆ ಹಾನಿ ಯೋಜನೆಯಲ್ಲಿ ಹೆದ್ದಾರಿ ದುರಸ್ತಿ ಅನುದಾನದಲ್ಲಿ ಮೋರಿ ಅಳವಡಿಸುವ ಕೆಲಸವನ್ನು ಎರಡು ತಿಂಗಳುಗಳ ಹಿಂದೆ ಆರಂಭಿಸಲಾಗಿದೆ.

ಹೆದ್ದಾರಿಯ ಒಂದು ಭಾಗದಲ್ಲಿ ಕಾಮಗಾರಿಯನ್ನು ಮಾಡಿ ಪೈಪುಗಳನ್ನು ಅಳವಡಿಸಿ ಅದರ ಮೇಲೆ ಮಣ್ಣು ಹಾಕದೆ, ಒಂದು ಬದಿಯಲ್ಲಿ ಮಾತ್ರ ಬ್ಯಾರಿಕೇಡ್ ಹಾಕಿರುವುದರಿಂದ, ವಾಹನ ಸವಾರರಿಗೆ ತೊಂದರೆಯಾಗಿ ನಿರಂತರವಾಗಿ ಅಪಘಾತಗಳು ನಡೆಯುತ್ತಲೇ ಇದೆ. ಕಳೆದ ಮಾರ್ಚ್ ನಲ್ಲಿ ಕಾಮಗಾರಿ ಆರಂಭಿಸಿ ಅರ್ಧ ಕಾಮಗಾರಿಯನ್ನು ನಿರ್ವಹಿಸಿ ಗುತ್ತಿಗೆದಾರ ಮತ್ತೆ ಆ ಕಡೆ ಸುಳಿಯಲೇ ಇಲ್ಲ. ಮುಲ್ಕಿಯ ಮೂಲದವರಾದ ಇಮ್ರಾನ್ ಎಂಬವರು ಗುತ್ತಿಗೆ ಪಡೆದಿದ್ದು. ಕಾಮಗಾರಿಯನ್ನು ಅರ್ಧದಲ್ಲಿ ಬಿಟ್ಟು ಹೋಗಿರುತ್ತಾರೆ. ಇದರ ಪರಿಣಾಮವಾಗಿ ವಾಹನ ಸವಾರರಿಗೆ ವಾಹನ ಚಲಾಯಿಸಲು ತೊಂದರೆಯಾಗಿ, ಅಪಘಾತದ ಸರಮಾಲೆ ಈ ಪ್ರದೇಶದಲ್ಲಿ ಸಂಭವಿಸಿರುತ್ತದೆ.
ಕಾಮಗಾರಿಯನ್ನು ಆರಂಭಿಸಿದ ದಿನದಿಂದ ಈವರೆಗೆ ಒಟ್ಟು 13 ಅಪಘಾತಗಳು ಸಂಭವಿಸಿದ್ದು. ಇದೀಗ ಮಳೆಗಾಲ ಆರಂಭವಾಗುತ್ತಿದ್ದು. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈಗೊಂಡು ಕಾಮಗಾರಿ ಮುಗಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

error: Content is protected !!