




ಬೆಂಗಳೂರು: ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಎಲ್ಲೆಡೆ ವಿದ್ಯುತ್ ಬಿಲ್ ಪಾವತಿಗೆ ನಿರಾಕರಣೆ ಕೂಗು ಕೇಳಿಬರುತ್ತಿದೆ. ಆದರೆ ಜನರು ವಿದ್ಯುತ್ ಬಳಸಿ ಅಥವಾ ಬಿಡಿ; ನಿಗದಿತ ಶುಲ್ಕ ಪಾವತಿಸುವುದು ತಪ್ಪದು!

ಕಾಂಗ್ರೆಸ್ ಈಗಾಗಲೇ 5 ಗ್ಯಾರಂಟಿ ಗಳನ್ನು ಘೋಷಿಸಿದ್ದು, ಆ ಪೈಕಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೂಡ ಒಂದಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನಡೆಯಲಿರುವ ಮೊದಲ ಸಚಿವ ಸಂಪುಟ ಸಭೆ ಯಲ್ಲಿ ಉಚಿತ ವಿದ್ಯುತ್ ಘೋಷಣೆ ಯನ್ನು ಅಂಗೀಕರಿಸುವ ಸಾಧ್ಯತೆ ಇದೆ. ಆದರೆ ಸರಕಾರ ವಿದ್ಯುತ್ ಉಚಿತವಾಗಿ ಕೊಟ್ಟರೂ ಗ್ರಾಹಕರಿಗೆ ನಿಗದಿತ ಶುಲ್ಕದ ರೂಪದಲ್ಲಿ ಬಿಲ್ ಪಾವತಿಸುವುದರಿಂದ ಮುಕ್ತಿ ಸಿಗುವುದು ಅನುಮಾನ.
ಯಾಕೆಂದರೆ ಪ್ರತೀ ತಿಂಗಳು ಬರುವ ವಿದ್ಯುತ್ ಬಿಲ್‌ನಲ್ಲಿ ನಿಗದಿತ ಶುಲ್ಕ ಮತ್ತು ಬಳಕೆ ಶುಲ್ಕ ಎಂಬ 2 ವಿಭಾಗಗಳು ಇರುತ್ತವೆ. ಕಾಂಗ್ರೆಸ್ ಹೇಳಿದ್ದು 200 ಯೂನಿಟ್‌ವರೆಗೆ ವಿದ್ಯುತ್ ಉಚಿತ ಎಂದಷ್ಟೇ. ಹೀಗಾಗಿ ನಿಗದಿತ ಶುಲ್ಕವನ್ನು ಎಂದಿನಂತೆ ಭರಿಸಬೇಕಾಗುತ್ತದೆ. ಪ್ರಸ್ತುತ ಗೃಹ ಬಳಕೆದಾರರಿಗೆ ಕನಿಷ್ಠ 110 ರಿಂದ ಗರಿಷ್ಠ 210 ರೂ. ನಿಗದಿತ ಶುಲ್ಕ ಇದೆ.
ಇತ್ತೀಚೆಗಿನ ವರ್ಷಗಳಲ್ಲಿ ವಿದ್ಯುತ್ ಬಳಕೆ ಶುಲ್ಕಕ್ಕಿಂತ ನಿಗದಿತ ಶುಲ್ಕಕ್ಕೆ ಎಲ್ಲ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳು ಒತ್ತು ನೀಡುತ್ತಿವೆ. ಕಳೆದ ಒಂದು ವರ್ಷದ ಅಂತರದಲ್ಲಿ ಎರಡು ಬಾರಿ ವಿದ್ಯುತ್ ದರ ಪರಿಷ್ಕರಣೆ ಆಗಿದ್ದು, ಶುಲ್ಕವನ್ನು 2022 ರಲ್ಲಿ ಪ್ರತೀ ಯೂನಿಟ್‌ಗೆ 48 ಪೈಸೆ ಮತ್ತು 2023ರಲ್ಲಿ 70 ಪೈಸೆ ಹೆಚ್ಚಿಸಲಾಗಿದೆ. 48 ಪೈಸೆಯಲ್ಲಿ 30 ಪೈಸೆ ಹಾಗೂ 70 ಪೈಸೆಯಲ್ಲಿ 55 ಪೈಸೆ ನಿಗದಿತ ಶುಲ್ಕವಾಗಿದೆ. ಮುಂಬರುವ ದಿನಗಳಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ “ಉಚಿತ ವಿದ್ಯುತ್ ಗ್ಯಾರಂಟಿ’ಯಿಂದ ಗ್ರಾಹಕರಿಗೆ ನಿರೀಕ್ಷಿತ ಮಟ್ಟದ ಲಾಭ ಸಿಗುವುದು ಅನುಮಾನ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಷರತ್ತುಗಳ ಸುಳಿವು
ಈ ಮಧ್ಯೆ ಷರತ್ತುಗಳ ಸುಳಿವನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ. 200 ಯೂನಿಟ್ ದಾಟಿದವರಿಗೆ ಅಂದರೆ, ಉದಾಹರಣೆಗೆ, 201 ಯೂನಿಟ್ ಬಳಕೆಯಾಗಿದ್ದರೆ ಪೂರ್ತಿ ಬಿಲ್ ಪಾವತಿಸಬೇಕಾಗುತ್ತದೆಯೇ? 250 ಯೂನಿಟ್ ಬಳಕೆಯಾಗಿದ್ದರೆ ಕೇವಲ 50 ಯೂನಿಟ್‌ಗೆ ಬಿಲ್ ಪಾವತಿಸಿದರೆ ಸಾಕೇ? ಬಿಪಿಎಲ್‌ನವರಿಗೆ ಮಾತ್ರ ಇದು ಅನ್ವಯವೇ? -ಇಂತಹ ಹಲವು ಗೊಂದಲಗಳಿಗೆ ಶನಿವಾರ ತೆರೆಬೀಳುವ ಸಾಧ್ಯತೆ ಇದೆ.

