ವಿದ್ಯಾರ್ಥಿಯು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿತು ವ್ಯಕ್ತಿತ್ವವನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲ – ಗಣೇಶ ಕೈಕುರೆ

ಶೇರ್ ಮಾಡಿ

ನೆಲ್ಯಾಡಿ: ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಡಬ ತಾಲೂಕಿನ ರೆಡ್ ಕ್ರಾಸ್ ಸದಸ್ಯರೂ, ಜೆಸಿಐ ವಲಯ ತರಬೇತುದಾರರೂ ಆಗಿರುವ ಗಣೇಶ ಕೈಕುರೆ ಅವರು ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಸಮುದಾಯ ಹೆಚ್ಚಾಗಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ರೆಡ್ ಕ್ರಾಸ್ ಮತ್ತು ಎನ್ ಎಸ್ ಎಸ್ ಘಟಕಗಳು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಾಮಾಜಿಕ ಸೇವೆಗೆ ಮುಕ್ತ ಮನಸ್ಥಿತಿಯನ್ನು ಹೊಂದುವಂತಹ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ. ಇಂತಹ ಸಾಂಸ್ಥಿಕ ಘಟಕಗಳ ಮೂಲಕ ಏರ್ಪಡುವ ರಕ್ತದಾನ, ವಾರ್ಷಿಕ ಶಿಬಿರ, ಮನೆ ಮನೆ ಭೇಟಿ ಮುಂತಾದ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಹಂತದಲ್ಲಿಯೇ ನಮ್ಮ ಸಮಾಜದ, ಪರಿಸರದ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಯಾವುದೇ ವಿದ್ಯಾರ್ಥಿಯು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಕಲಿತು ವ್ಯಕ್ತಿತ್ವವನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲ. ರೆಡ್ ಕ್ರಾಸ್ ನಂತಹ ಸೇವಾ ಮನೋಭಾವದ ಕಾರ್ಯಗಳ ಮೂಲಕ ಸಕ್ರಿಯವಾಗಿ ಸಾಮಾಜಿಕವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮಾನವೀಯ ನೆಲೆಗಳನ್ನು ವಿಸ್ತರಿಸುತ್ತಾ ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವಲ್ಲಿ ಪ್ರಾಯೋಗಿಕವಾಗಿ ನಾವು ಬದುಕಬೇಕು ಎಂದು ಸಲಹೆ ನೀಡಿದರು.
ಜೆಸಿಐ ಮತ್ತು ರೆಡ್ ಕ್ರಾಸ್ ನಂತಹ ಸಂಸ್ಥೆಗಳ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ, ಆಪತ್ತಿನಲ್ಲಿದ್ದವರಿಗೆ ನೆರವಾಗುವ, ಸಹಾಯ ಮಾಡುವಂತಹ ಅವಕಾಶ ಪಡೆದುಕೊಂಡಿದ್ದ ನಾನು ಇಂತಹ ಮಾನವೀಯ ವ್ಯಕ್ತಿತ್ವದ ಅಭಿವ್ಯಕ್ತಿಗೆ ನಮ್ಮಲ್ಲಿ ಪ್ರೇರಣೆ ತುಂಬಲು ಇಂತಹ ಸಾಮಾಜಿಕ ಸೇವೆಗಳೇ ಮುಖ್ಯಪಾತ್ರವಹಿಸುತ್ತವೆ‌. ಮಾನವೀಯ ಮೌಲ್ಯಗಳ ಉಳಿವಿಗಾಗಿ ಮಾಡುವ ಸಣ್ಣ ಸಣ್ಣ ಕೆಲಸಗಳನ್ನೂ ಕೂಡ ಯಾವುದೇ ಬೇಧ ಭಾವವಿಲ್ಲದೆ ನಿರ್ವಹಿಸುವ ಕೌಶಲಗಳು ಬೆಳೆಸುವ ರೆಡ್‌ ಕ್ರಾಸ್ ನಂತಹ ಘಟಕದ ಭಾಗವಾಗಿ ರೂಪಿಸಿಕೊಂಡ ವ್ಯಕ್ತಿತ್ವದ ಕುರಿತು ಅನೇಕ ನೈಜ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ ಅವರು ಮಾತನಾಡುತ್ತ, ಪ್ರತಿ ವರ್ಷದ ಮೇ 8 ರಂದು ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸುತ್ತೇವೆ. ಯುದ್ಧಕಾಲದ ಪ್ರಕ್ಷುಬ್ಧ ಪರಿಸ್ಥಿತಿ ಆವರಿಸಿದ ಪ್ರದೇಶಗಳಲ್ಲಿ ಮೂಲವೃತ್ತಿಯಾಗಿದ್ದ ವ್ಯಾಪಾರವನ್ನು ತ್ಯಜಿಸಿ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದ ಸ್ವಿಟ್ಜರ್ಲ್ಯಾಂಡ್ ದೇಶದ ‘ಹೆನ್ರಿ ಡ್ಯುನಾಂಟ್’ ಅವರ ಜನ್ಮದಿನದ ನೆನಪಿನಲ್ಲಿ ಆಚರಿಸುವ ರೆಡ್ ಕ್ರಾಸ್ ದಿನಾಚರಣೆಯ ಹಿನ್ನಲೆಯ ಚಾರಿತ್ರಿಕ ಮಹತ್ವವನ್ನು ವಿವರಿಸಿದರು. ಈ ವರ್ಷದ ರೆಡ್ ಕ್ರಾಸ್ ದಿನಾಚರಣೆಯ ಧ್ಯೇಯ ವಾಕ್ಯದೊಂದಿಗೆ “ಮಾನವೀಯತೆಯಿಂದ ಶಾಂತಿ” ಸ್ಥಾಪಿಸುವ ರೆಡ್ ಕ್ರಾಸ್ ಸಂಸ್ಥೆಯ ಭಾಗವಾಗಿ ಸಾಮಾಜಿಕ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ರೆಡ್ ಕ್ರಾಸ್ ಸ್ವಯಂ ಸೇವಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

See also  ಕಡಬ:ಒಕ್ಕೂಟದ ಅಧ್ಶಕ್ಷರು ಒಕ್ಕೂಟದ ಸ್ವಸಹಾಯ ಸಂಘಗಳ ರಕ್ಷಾ
ಕವಚವಾಗಿರಬೇಕು- ಪ್ರವೀಣ್ ಕುಮಾರ್

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾಗಿರುವ ಡಾ.ನೂರಂದಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಪನ್ಮೂಲ ವ್ಯಕ್ತಿಗಳ ಪರಿಚಯದೊಂದಿಗೆ ಸರ್ವರನ್ನು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ದಿವ್ಯಶ್ರೀ ಜಿ ವಂದಿಸಿದರು. ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಭಾರತಿ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು.

ಉಪನ್ಯಾಸಕಿಯರಾದ ಡೀನಾ ಪಿ.ಪಿ., ವನಿತಾ ಪಿ, ದಿವ್ಯ ಕೆ, ವೆರೋಣಿಕಾ ಪ್ರಭಾ, ಸ್ಪೂರ್ತಿ ಕೆ.ಟಿ, ಶೃತಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಆನಂದ್, ಉಪನ್ಯಾಸಕರಾದ ಸುರೇಶ್.ಕೆ, ಗ್ರಂಥಪಾಲಕರಾದ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ಮತ್ತು ವಿದ್ಯಾರ್ಥಿ ಸಂಘದ ನಾಯಕರಾದ ಗುರುಪ್ರಸಾದ್, ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸ್ವಯಂಸೇವಕರು, ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಬೋಧಕೇತರ ಸಿಬ್ಬಂದಿಯವರಾದ ಕುಮಾರಿ ದಿವ್ಯ, ಸುಮಾ, ವಸಂತ, ಶ್ರೀಮತಿ ವಿಮಲಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!