ಬೆಂಗಳೂರು : ವಿಧಾನಸೌಧ ಮುಂಭಾಗ ಹೈಕೋರ್ಟ್ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಸ್ತೆಗೆ ಗೋಮೂತ್ರ ಸಿಂಪಡನೆ ಮಾಡಿದರು.
ಭ್ರಷ್ಟ 40% ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಹಸುವಿನ ಗಂಜಲದ (ಗೋಮೂತ್ರದಿಂದ) ಮೂಲಕ ವಿಧಾನಸೌಧದ ದ್ವಾರ ಬಾಗಿಲಿನಲ್ಲಿ ಶುದ್ಧೀಕರಣ ಮಾಡಿ ಹಾಗೂ ಪೂಜೆಯನ್ನು ನೆರವೇರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಿಂದ ತೊಲಗಿ ಶುದ್ಧ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಒಳಿತಿಗಾಗಿ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಹೇಳಿದರು.
ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ಶಾಪ ವಿಧಾನಸೌಧಕ್ಕೆ ಅಂಟಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಶುದ್ಧೀಕರಣಗೊಳಿಸಿ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್ ಪಕ್ಷ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ. ಜನರ ಆಶಯದಂತೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಹಾಗೂ ಮುಖ್ಯಮಂತ್ರಿಗಳಿಗೆ ಉಪ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಶಕ್ತಿ ಕರುಣಿಸಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸಲಾಯಿತು ಎಂದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ಧನ್ ಅನಿಲ್, ಹೇಮರಾಜು,ಬಿ. ಮಂಜುನಾಥ್, ಪ್ರಶಾಂತ್, ಪುಟ್ಟರಾಜು, ಹೊಬ್ಳೆಶ್, ಚಿನ್ನಿ ಪ್ರಕಾಶ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.