ಬೆಂಗಳೂರು: ವಿಧಾನಸಭಾ ಸ್ಪೀಕರ್ ಹುದ್ದೆ ನೇಮಕಾತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ನಾಮಪತ್ರ ಸಲ್ಲಿಕೆ ಮಾಡಿದರು. ಮಂಗಳವಾರ ವಿಧಾನಸಭೆ ಕಾರ್ಯದರ್ಶಿ ಅವರ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅವಿರೋಧವಾಗಿ ಯು.ಟಿ ಖಾದರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ನಾಳೆ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಯು.ಟಿ ಖಾದರ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಳೆದ ವಿಧಾನಸಭೆ ಅವಧಿಯಲ್ಲಿ ಅವರು ಪ್ರತಿಪಕ್ಷದ ಉಪ ನಾಯಕನಾಗಿ ಕಾರ್ಯ ನಿರ್ವಹಿಸಿದ್ದರು.
ನಾಮ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಯು.ಟಿ ಖಾದರ್, ಸಂವಿಧಾನ ಬದ್ಧವಾದ ಹುದ್ದೆಯನ್ನು ಪಕ್ಷದ ಹೈಕಮಾಂಡ್ ನೀಡಿದೆ. ಅತ್ಯಂತ ಸಂತೋಷದಿಂದ ಈ ಹುದ್ದೆಯನ್ನು ಒಪ್ಪಿದ್ದೇನೆ. ಗೌರವಯುತವಾದ ಸ್ಥಾನಕ್ಕೆ ಗೌರವ ತಂದು ಕೊಡುತ್ತೇನೆ ಎಂದರು.
ಸಚಿವ ಸ್ಥಾನ ಯಾರಿಗೂ ಬೇಕಾದರೂ ಆಗಬಹುದು. ಆದರೆ ಸಭಾಧ್ಯಕ್ಷ ಸ್ಥಾನ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಆಡಳಿತ ಹಾಗೂ ಪ್ರತಿಪಕ್ಷದ ಸಹಕಾರ ಪಡೆದುಕೊಂಡು ಪ್ರೀತಿಯಿಂದ, ಪಾರದರ್ಶಕವಾಗಿ ಸಭೆಯನ್ನು ನಡೆಸಿಕೊಂಡು ಹೋಗುತ್ತೇನೆ ಎಂದರು.