ಯಕ್ಷಗಾನ, ನಾಟಕ, ತಾಳಮದ್ದಳೆ ಜೀವಂತಿಕೆಯನ್ನು ಬಿಂಬಿಸುವುದರ ಜತೆ ಘನತೆ, ಗೌರವ, ನೈಜತೆಯನ್ನು ಹೆಚ್ಚಿಸುತ್ತದೆ – ಡಾ.ಹೇಮಾವತಿ ವೀ.ಹೆಗ್ಗಡೆ

ಶೇರ್ ಮಾಡಿ

ಉಜಿರೆ:ಯಕ್ಷಗಾನ, ನಾಟಕ, ತಾಳಮದ್ದಳೆ ಮೊದಲಾದ ಕಲಾ ಪ್ರಕಾರಗಳು ಪಾತ್ರಗಳ ಜೀವಂತಿಕೆಯನ್ನು ಬಿಂಬಿಸುವುದರ ಜತೆ ಆ ಪಾತ್ರದ ಘನತೆ, ಗೌರವ, ನೈಜತೆಯನ್ನು ಹೆಚ್ಚಿಸುತ್ತದೆ. ಪಾತ್ರಗಳ ಮೂಲಕ ಇವುಗಳ ಶ್ರೇಷ್ಠತೆಯನ್ನು ಮತ್ತೆ ಮತ್ತೆ ನೋಡುವಂತೆ ಪ್ರೇರೇಪಿಸುತ್ತವೆ. ಜ್ಞಾನ ವೃದ್ದಿಗೆ ಓದು, ಭಾಷೆಯ ಆಳವಾದ ತಿಳುವಳಿಕೆ ಪ್ರಮುಖವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಬೇಕಿದೆ.”
ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ ಹೇಮಾವತಿ ವೀ.ಹೆಗ್ಗಡೆ ಹೇಳಿದರು.

ಅವರು ಉಜಿರೆಯ ಎಸ್ ಡಿ ಎಂ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ಸಂಘ ಮತ್ತು ನಿನಾಸಂ ಪ್ರತಿಷ್ಠಾನ ಹೆಗ್ಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಜರಗಿದ ಕಲಾನುಸಂಧಾನ ಶಿಬಿರದ ರಜತ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಹಿಂದೆ ಮನೆಮನೆಗಳಲ್ಲೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂದಿನ ಮಹಿಳೆಯರು ಓದಿದ್ದು ಕಡಿಮೆಯಾದರು ಸಾಹಿತ್ಯ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಹೆಚ್ಚು ಜ್ಞಾನವಂತರಾಗಿದ್ದರು. ಸಾಹಿತ್ಯದ ಅನುಭವ, ವಿಮರ್ಶೆ ಜ್ಞಾನದ ಬೆಳವಣಿಗೆ ಮೇಲೆ ಪೂರಕ ಪರಿಣಾಮವನ್ನು ಬೀರುವುದರ ಜತೆ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ” ಎಂದರು.

ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ನೆರವೇರಿಸಿದ ಬೆಂಗಳೂರಿನ ಕಥೆಗಾರ ವಸುಧೇಂದ್ರ ಮಾತನಾಡಿ “ಕಲೆಗೆ ಭಾಷೆ, ಜಾತಿ, ಧರ್ಮ, ದೇಶದ ಸೀಮೆಯನ್ನು ದಾಟಿ ಮುನ್ನಡೆಯುವ ಶಕ್ತಿ ಇದೆ. ಅವಕಾಶಗಳನ್ನು ಬಳಸಿಕೊಂಡು ನಮಗೆ ಆಸಕ್ತಿ ಇರುವ ಕಲೆಯ ಅಧ್ಯಯನದ ಮೂಲಕ ಅದರ ಜತೆ ಪ್ರೀತಿಯ ಒಡನಾಟವಿದ್ದರೆ ಹರಿಯುವ ನೀರಿನಂತೆ ಮುಂದುವರೆಯಲು ಸಾಧ್ಯ. ಪ್ರತಿಯೊಬ್ಬರಲ್ಲಿ ಇರುವ ಸುಪ್ತ ಕಲೆಗಳು ಹೊರಹೊಮ್ಮಲು ಶಿಬಿರಗಳು ದಾರಿ ದೀಪವಾಗಿವೆ” ಎಂದರು.
ವಿಮರ್ಶಕ ಪ್ರೊ.ಟಿ.ಪಿ.ಅಶೋಕ ಮಾತನಾಡಿ “ಸತತವಾಗಿ ಒಂದೇ ಪರಿಸರದಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಕಲೆಯ ವಿಕಸನಕ್ಕೆ ಸಮಸ್ಯೆ ಉಂಟಾಗುತ್ತದೆ. ಪರಿಸರ, ಒಡನಾಟ ಬದಲಾವಣೆಯಿಂದ ಕಲೆಯು ವೃದ್ಧಿಸುತ್ತದೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳು ಇಂತಹ ಬದಲಾವಣೆಯ ವಾತಾವರಣವನ್ನು ಸೃಷ್ಟಿಸಿದ್ದು ವಿದ್ಯಾರ್ಥಿ ಸಮೂಹಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುತ್ತಿವೆ ಇಲ್ಲಿನ ಸಿದ್ದವನ, ರತ್ನಮಾನಸದಂತಹ ಶೈಕ್ಷಣಿಕ ಪ್ರಯೋಗಗಳು ದೇಶವೇ ಗುರುತಿಸುವಂತಹ ಕೆಲಸ ಮಾಡುತ್ತಿವೆ” ಎಂದರು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಶುಭ ಹಾರೈಸಿದರು. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ.ಬಿ.ಪಿ. ಸಂಪತ್ ಕುಮಾರ್ ರಜತಾವಲೋಕನ ನೆರವೇರಿಸಿದರು. ಪ್ರಿನ್ಸಿಪಾಲ್ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಭೋಜಮ್ಮ ಕೆ.ಎನ್.ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ದಿವ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿ ಜಯಶ್ರೀ ವಂದಿಸಿದರು.

ಕಾವ್ಯ, ನಾಟಕ, ಚಲನಚಿತ್ರ, ಸಾಹಿತ್ಯ, ಛಾಯಾಗ್ರಹಣ ಹೀಗೆ ಕಲೆಯ ನಾನಾ ಮಜಲುಗಳಲ್ಲಿ ಅನುಭವ ಪಡೆದು ಮುಂದುವರಿಯಲು 1998ರಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಿವೃತ್ತ ಪ್ರಿನ್ಸಿಪಾಲ್ ಡಾ.ಬಿ.ಯಶೋವರ್ಮ ಅವರ ನಿರ್ದೇಶನದಂತೆ ನೀನಾಸಂ ಪ್ರತಿಷ್ಠಾನದ ಸಹಕಾರದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಈ ವಿಶೇಷ ಅಧ್ಯಯನ ಶಿಬಿರ ಆರಂಭಿಸಲಾಗಿದ್ದು ಈ ಬಾರಿ ಇದಕ್ಕೆ ರಜತ ವರ್ಷ ಸಂಭ್ರಮ. ಇದುವರೆಗೆ 4,000 ಮಂದಿ ವಿದ್ಯಾರ್ಥಿಗಳು ಹಲವು ಖ್ಯಾತ ವಿಮರ್ಶಕರು, ಕಲಾವಿದರಿಂದ ತರಬೇತಿ ಪಡೆದಿದ್ದಾರೆ.
ಈ ಬಾರಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರೊ.ಜಸವಂತ ಜಾಧವ್, ಡಾ.ಮಾಧವ ಚಿಪ್ಪಳ್ಳಿ, ವಿದ್ಯಾ ಹೆಗಡೆ, ಡಾ.ಎಂ.ಗಣೇಶ್, ಕೆ.ಎಸ್.ರಾಜಾರಾಮ್, ಶಿಶಿರ ಕೆ.ವಿ. ಮೊದಲಾದವರಿಂದ ಶುಕ್ರವಾರ ಹಾಗೂ ಶನಿವಾರ ತರಬೇತಿ ಪಡೆಯಲಿರುವರು.

Leave a Reply

error: Content is protected !!