ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ-ಅಭಿವಂದನಮ್-2023

ಶೇರ್ ಮಾಡಿ

ಪುತ್ತೂರು: ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಪರಿಶ್ರಮ ಹೆಚ್ಚಿನ ಮಹತ್ವ ಪಡೆಯುತ್ತದೆ. ಸಾಧನೆಗೆ ಬುದ್ಧಿವಂತಿಕೆಯ ಜೊತೆಗೆ ಸತತ ಪರಿಶ್ರಮ ಅಗತ್ಯ ಎಂದು ಸಮಾಜ ಸೇವಾ ಕಾರ್ಯಕರ್ತರಾದ ಯತೀಶ್ ಆರ್ವಾರ್ ಹೇಳಿದರು.

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ “ಅಭಿವಂದನಮ್-2023″ರ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ನಾವು ನಮಗೋಸ್ಕರ ಮಾತ್ರವಲ್ಲದೇ ದೇಶಕ್ಕೋಸ್ಕರ ಬದುಕಬೇಕು. ಕೃಷ್ಣಂ ವಂದೇ ಜಗದ್ಗುರುಮ್ ಎಂಬ ನಂಬಿಕೆ ಇರುವ ನಾವು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್. ಎಂ ಹಾಗೂ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಸುಂದರ ಗೌಡ ಇವರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಮುರಳೀಧರ.ಕೆ ಮಾತನಾಡಿ ಹಲವಾರು ವರ್ಷಗಳ ಪರಿಶ್ರಮದಿಂದ ಗಳಿಸಿದ ಈ ಸಾಧನೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಿರಿಯರ ಮೇಲಿದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಕುಮಾರಿ ಹಿಮಾನಿ ತಾನು ಕಲಿತ ಸಂಸ್ಥೆ ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕ ವೃಂದವನ್ನು ಸ್ಮರಿಸಿಕೊಂಡು, ತನ್ನ ಶಾಲಾ ಜೀವನದ ಅನುಭವಗಳನ್ನು ಹಂಚಿಕೊಂಡರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ರವಿನಾರಾಯಣ ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಶಿಕ್ಷಕ ರಾಧಾಕೃಷ್ಣ ರೈ ವಂದಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಕುಮಾರಿ ಹಾಗೂ ಶ್ರೀಮತಿ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಪ್ರಶಾಂತ್ ಭಟ್ ಮತ್ತು ಶ್ರೀಮತಿ ಪುಷ್ಪಲತಾ.ಬಿ.ಕೆ ಸಾಧನೆಗೈದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶಾಂತಿ ಶೆಣೈ ಉಪಸ್ಥಿತರಿದ್ದರು.
ಸಮಾರಂಭದ ಆರಂಭದಲ್ಲಿ ಎಸ್.ಎಸ್.ಎಲ್.ಸಿಯ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಸ್ಕೌಟ್ಸ್ ವಿದ್ಯಾರ್ಥಿಗಳ ತಂಡ ಬ್ಯಾಂಡ್ ವಾದನದೊಂದಿಗೆ ಯಾದವಶ್ರೀ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಶ್ರೀ ಮಹಾಲಿಂಗೇಶ್ವರ ದೇವರ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಲಾಯಿತು. ಸಾಧಕ ವಿದ್ಯಾರ್ಥಿಗಳೆಲ್ಲರನ್ನೂ ಅವರ ಪೋಷಕರೊಂದಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಶಾಲು ಹೊದಿಸಿ ಅಭಿನಂಧಿಸಿ, ಯಶಸ್ಸನ್ನು ಕೋರಲಾಯಿತು. ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ 2023ರ ತಂಡದ ವಿದ್ಯಾರ್ಥಿಗಳೆಲ್ಲರೂ ತಮ್ಮ ಪೋಷಕರೊಂದಿಗೆ ಭಾಗವಹಿಸಿರುವುದು ವಿಶೇಷವಾಗಿತ್ತು.
ನಿರ್ಗಮನ ತಂಡದ ವಿದ್ಯಾರ್ಥಿಗಳಾದ ಅನನ್ಯ ರಾವ್ (ಕಲ್ಲಾರೆಯ ಕರಾವಳಿ ಬುಕ್ಸ್ ಮತ್ತು ಸ್ಟೇಷನರಿಯ ಮಾಲಕರಾದ ರಾಜೇಶ್ ರಾವ್ ಹಾಗೂ ಶ್ರೀಮತಿ ಸಪ್ನಾ ಆರ್.ರಾವ್ ದಂಪತಿ ಪುತ್ರಿ) ಹೆತ್ತವರು ರೂ.25,000/- ಶ್ರದ್ಧಾಲಕ್ಷ್ಮೀ (ರವಿಶಂಕರ.ಡಿ ಮತ್ತು ಶ್ರೀಮತಿ ಅನುಪಮ ದಂಪತಿ ಪುತ್ರಿ) ಯ ಹೆತ್ತವರು ರೂ. 10,000/- ಮೊತ್ತವನ್ನು ಶಾಲೆಗೆ ಕೃತಜ್ಞತಾಪೂರ್ವಕವಾಗಿ ಸಮರ್ಪಿಸಿದರು. ದೇಣಿಗೆಯನ್ನು ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತೂರು(ರಿ.) ಇದರ ನಿರ್ದೇಶಕರಾದ ಮುರಳೀಧರ ಸ್ವೀಕರಿಸಿ ಅಭಿನಂಧನೆಗಳು ಸಲ್ಲಿಸಿದರು.

Leave a Reply

error: Content is protected !!