ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಈಗ ರಾಜ್ಯದಲ್ಲಿ ಕಾಲೇಜಯಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿವೆ. ವಿದ್ಯಾರ್ಥಿಗಳು ತಮ್ಮ ಇಷ್ಟದ ಕೋರ್ಸ್‌ಗಳನ್ನು ತಾವು ಇಷ್ಟಪಟ್ಟ ಕಾಲೇಜುಗಳಲ್ಲಿ ಪಡೆಯಲು ಹವಣಿಸುತ್ತಿರುತ್ತಾರೆ. ಆದರೆ ಕೆಲವೊಮ್ಮೆ ತಾವು ಇಷ್ಟ ಪಟ್ಟ ಕೋರ್ಸ್ ಮತ್ತು ಕಾಲೇಜುಗಳ ಪ್ರವೇಶ ಶುಲ್ಕ ಹೆಚ್ಚಿಗೆ ಇರುವುದರಿಂದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಅಂತಹ ವಿದ್ಯಾರ್ಥಿಗಳು ಹೆಚ್ಚಿಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಸರ್ಕಾರ ಮತ್ತು ಕೆಲವು ಬ್ಯಾಂಕ್‌ಗಳು ಶೈಕ್ಷಣಿಕ ಸಾಲವನ್ನು ನೀಡುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ಆನ್‌ಲೈನ್ ಸಾಲ
ಶಿಕ್ಷಣ ಸಾಲವನ್ನು ದೇಶದಲ್ಲಿರುವ ಎಲ್ಲ ಬ್ಯಾಂಕ್‌ಗಳು ನೀಡುತ್ತವೆ. ಈ ಶಿಕ್ಷಣ ಸಾಲಗಳನ್ನು ಪಡೆಯಲು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಪೋರ್ಟಲ್ https://www.vidyalakshmi.co.in/ ಅನ್ನು ಬಳಸಬಹುದಾಗಿದೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಬಹುತೇಕ ಎಲ್ಲಾ ಬ್ಯಾಂಕ್‌ಗಳು ಈ ಪೋರ್ಟಲ್‌ಗೆ ಸಂಪರ್ಕ ಹೊಂದಿವೆ. ಈ ಪೋರ್ಟಲ್ ಅನ್ನು ಪ್ರವೇಶಿಸುವ ಮೂಲಕ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಸಾಲಗಳಿಗೆ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಶಿಕ್ಷಣ ಸಾಲವನ್ನು ಪಡೆಯಬೇಕಾದರೆ ಕೆಲವು ಮಹತ್ವದ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿದರ, ಮರುಪಾವತಿ ಮಾಡುವ ದಿನಾಂಕ, ಪೂರ್ವಪಾವತಿ ಶುಲ್ಕ, ಭದ್ರತೆ ಅಥವಾ ಜಾಮೀನು ಹಾಗು ಮುಖ್ಯವಾಗಿ ಸಾಲದ ಅರ್ಜಿಯ ಕ್ಷಿಪ್ರ ವಿಲೇವಾರಿ ಇವುಗಳನ್ನು ಪರಿಶೀಲಿಸಬೇಕಾಗುತ್ತದೆ.
ಮೆರಿಟ್ ಆಧಾರದ ಮೇಲೆ ಸಾಲ ಹೇಗೆ ನೀಡಲಾಗುತ್ತದೆ?
ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳು ಸಾಲವನ್ನು ನೀಡುವಾಗ ವಿದ್ಯಾರ್ಥಿಯ ಮೆರಿಟ್ ಅನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೆರಿಟ್ ಅಧಿಕ ಇರುವ ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲದೆ ಸಾಲ ಪಡೆಯಲು ಅರ್ಹ ಎಂದು ಕೆಲವು ಬ್ಯಾಂಕ್‌ಗಳು ಪರಿಗಣಿಸುತ್ತವೆ. ಅದು ಆಯಾ ಬ್ಯಾಂಕ್‌ಗಳ ಮೇಲೆ ಅವಲಿಂಭತವಾಗಿರುತ್ತದೆ. ಬ್ಯಾಂಕ್‌ಗಳು ಕೇಳುವ ಸೂಕ್ತ ದಾಖಲೆಗಳು, ಅಂದರೆ ಕೆವೈಸಿ, ಶೈಕ್ಷಣಿಕ ಅರ್ಹತೆ ಕುರಿತು ದಾಖಲೆಗಳು, ಪ್ರವೇಶ ಪಡೆಯುವ ಶೈಕ್ಷಣಿಕ ಸಂಸ್ಥೆಯ ವಿವರ, ಶುಲ್ಕ, ಪ್ರವೇಶ ಪತ್ರ, ಸಾರಿಗೆ ವೆಚ್ಚ, ಮೊದಲಾದವುಗಳನ್ನು ನೀಡಬೇಕು.
ಭದ್ರತೆಯಿಲ್ಲದ ಸಾಲ ಎಷ್ಟು ನೀಡಲಾಗುತ್ತದೆ?
ಶೈಕ್ಷಣಿಕ ಸಾಲದಲ್ಲಿ ಎರಡು ರೀತಿಯ ಸಾಲಗಳನ್ನು ನೀಡಲಾಗುತ್ತದೆ. ಭದ್ರತಾ ಸಾಲ ಹಾಗು ಭದ್ರತೆಯಿಲ್ಲದ ಸಾಲ. ಸಾಮಾನ್ಯವಾಗಿ 50 ಸಾವಿರದಿಂದ ನಾಲ್ಕು ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಮಾರ್ಜಿನ್ ಕೂಡಾ ಇರುವುದಿಲ್ಲ. ಬ್ಯಾಂಕ್ ಪೂರ್ಣ ಪ್ರಮಾಣದ ಮೊತ್ತವನ್ನು ನೀಡುತ್ತದೆ. ಇದಕ್ಕೆ ಭದ್ರತೆಯಿಲ್ಲದ ಸಾಲವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಬಡ್ಡಿದರ ಕೊಂಚ ಜಾಸ್ತಿ ಇರಬಹುದು. ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪೋಷಕರನ್ನು ಜಂಟಿ ಸಾಲಗಾರರೆಂದು ಪರಿಗಣಿಸುತ್ತವೆ. ವಿದ್ಯಾರ್ಥಿ ಸಾಲ ಮರುಪಾವತಿ ಮಾಡಲು ವಿಫಲವಾದರೆ ಪೋಷಕರೇ ಅದಕ್ಕೆ ಜವಬ್ದಾರರು.
ಭದ್ರತಾ ಸಾಲ ಎಂದರೇನು?
ಇನ್ನೂ ರೂ.4 ಲಕ್ಷದಿಂದ ರೂ.7.5 ಲಕ್ಷದವರೆಗಿನ ಸಾಲಕ್ಕೆ ಮೂರನೇ ಪಾರ್ಟಿ ಜಾಮೀನುದಾರರಾಗಬೇಕಾಗುತ್ತದೆ ಅಥವಾ ಭದ್ರತೆ ನೀಡಬೇಕಾಗುತ್ತದೆ. ಇದು ಸೆಕ್ಯುರ್ಡ್ ಅಥವಾ ಭದ್ರತಾ ಸಾಲ. ಸಾಲದ ಮೊತ್ತ ರೂ.7.5 ಲಕ್ಷಕ್ಕಿಂತ ಅಧಿಕವಿದ್ದರೆ ಅದಕ್ಕೆ ಆಸ್ತಿ, ಮನೆ ಕೃಷಿಯೇತರ ಭೂಮಿ, ವಿಮೆ, ಭದ್ರತಾ ಠೇವಣಿ ಮೊದಲಾದವುಗಳನ್ನು ಒತ್ತೆ ಇಡಬೇಕಾಗುತ್ತದೆ.
ಈ ವಿಷಯಗಳನ್ನು ತಪ್ಪದೆ ಗಮನಿಸಿ
ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ನೀಡುತ್ತವೆ. ಸೂಕ್ತ ಪರಿಶೀಲನೆಯನ್ನು ನಡೆಸಿ ಇದರ ಲಾಭವನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳು ಶಿಕ್ಷಣ ಸಾಲ ಪಡೆಯುವ ಮೊದಲು ಪ್ರತಿಯೊಂದನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ. ವಿವಿಧ ಬ್ಯಾಂಕ್‌ಗಳು ನೀಡುವ ಆಫರ್‌ಗಳನ್ನು ನೋಡಿಕೊಂಡು ಆಯ್ಕೆ ಮಾಡಿಕೊಳ್ಳಿ. ಸಾಮಾನ್ಯವಾಗಿ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಅಧ್ಯಯನಕ್ಕೆ ಸಾಲವನ್ನು ನೀಡಲಾಗುತ್ತದೆ. ಅಲ್ಪಾವಧಿ ಕೋರ್ಸ್‌ಗಳಿಗೆ ಅಂದರೆ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಸಾಲ ಲಭ್ಯವಿರುವುದಿಲ್ಲ. ಈ ಬಗ್ಗೆ ಬ್ಯಾಂಕ್‌ಗಳಲ್ಲಿ ಕೇಳಿ ದೃಢಪಡಿಸಿಕೊಳ್ಳಿ.
ಸಾಲ ಮರುಪಾವತಿ ಹೇಗೆ?
ಸಾಮಾನ್ಯವಾಗಿ ಶಿಕ್ಷಣ ಸಾಲದ ಮರುಪಾವತಿಯು ಶಿಕ್ಷಣ ಮುಗಿದು ಒಂದು ವರ್ಷದ ನಂತರ ಅಥವಾ ಉದ್ಯೋಗಕ್ಕೆ ಸೇರಿದ ಆರು ತಿಂಗಳ ಸಂತರ ಆರಂಭವಾಗುತ್ತದೆ. ಇವರೆಡರಲ್ಲಿ ಯಾವುದು ಮೊದಲು ಅದನ್ನು ಪರಿಗಣಿಸಲಾಗುತ್ತದೆ. ಇಎಂಐ ಶುರುವಾಗುವ ಮೊದಲೇ ಮರುಪಾವತಿಗೆ ಯೋಜನೆ ರೂಪಿಸಿಕೊಂಡರೆ ಉತ್ತಮ.