ಬೆಳ್ತಂಗಡಿ : ಸರಣಿ ರೈಲು ಡಿಕ್ಕಿಯಲ್ಲಿ ತೀರ್ಥಕ್ಷೇತ್ರವಾದ ಜಾರ್ಖಂಡ್ ನ ಗಿರಡಿ ಜಿಲ್ಲೆಯ ಸಮ್ಮೇದ ಶಿಖರ್ಜಿ ಯಾತ್ರೆ ಕೈಗೊಳ್ಳುತ್ತಿದ್ದ ಕಳಸ ತಂಡದ 110 ಮಂದಿಯ ತಂಡ ಯಶವಂತಪುರ-ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದು, ಈ ತಂಡದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ವೇಣೂರಿನ ಕೆಲವು ಮಂದಿ ಸದಸ್ಯರಿದ್ದು ಅವರೆಲ್ಲರೂ ಅಪಾಯದಿಂದ ಪಾರಾಗಿದ್ದು ತಮ್ಮ ಪ್ರಯಾಣವನ್ನು ಮುಂದುವರಿಸಿರುವುದಾಗಿ ತಿಳಿದು ಬಂದಿದೆ.
ತಂಡವು ಉಜಿರೆ ವೇಣೂರಿನಿಂದ ಕಳಸಕ್ಕೆ ತೆರಳಿ ಮೇ 31 ರಂದು ಬೆಂಗಳೂರು ಮೂಲಕ ರೈಲಿನಲ್ಲಿ ಪ್ರಯಾಣ ಮುಂದುವರಿಸಿತ್ತು. ಹಳಿ ತಪ್ಪಿದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳಿಗೆ ಇವರು ಪ್ರಯಾಣಿಸುತ್ತಿದ್ದ ರೈಲು ಒಡಿಸ್ಸಾದಲ್ಲಿ ಡಿಕ್ಕಿಯಾಗಿದ್ದು ಗೂಡ್ಸ್ ರೈಲು ಕೂಡ ಬಡಿದಿದೆ.
ಈ ಸಮಯ ಯಶವಂತಪುರ-ಹೌರಾ ಎಕ್ಸ್ ಪ್ರೆಸ್ ನ ಎಸ್-6 ಮತ್ತು 7 ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಈ ತಂಡ ಯಾವುದೇ ಅಪಾಯವಿಲ್ಲದೆ ಪಾರಾಗಿದೆ.
ವೇಣೂರಿನ ಮಮತಾ ಜೈನ್,ಆಶಾಲತಾ ಜೈನ್, ದಿವ್ಯಶ್ರೀ ಕುತ್ತೋಡಿ ಉಜಿರೆಯ ರತ್ನಶ್ರೀ ದೊಂಡೋಲೆ, ಶಾಂತಿರಾಜ್, ಅರ್ಪಣಾ,ಚಾರ್ವಿ ಪ್ರೀತಿ,ಅರ್ಚನಾ,ರಂಜಿತಾ,ಸುಜಿತ್ ಸೇರಿದಂತೆ ತಾಲೂಕಿನ ಸುಮಾರು 21 ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಜೂ. 2 ರಂದು ಸಂಜೆ 7:30ರ ಸಮಯ ನಾವು ಪ್ರಯಾಣಿಸುತ್ತಿದ್ದ ರೈಲು ಏಕಾಏಕಿ ಭಾರಿ ಸದ್ದಿನೊಂದಿಗೆ ನಿಂತಿದೆ. ಈ ವೇಳೆ ಭೀಕರ ಅಪಘಾತ ಸಂಭವಿಸಿದ ಮಾಹಿತಿ ತಿಳಿಯಿತು. ನಮ್ಮ ತಂಡದ ಕೆಲವು ಸದಸ್ಯರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಪರಿಸ್ಥಿತಿ ಬಗ್ಗೆ ವಿವರಿಸಿದರು ಎಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತಂಡದ ಸದಸ್ಯೆ ಆಶಾಲತಾ ಜೈನ್ ವೇಣೂರು ತಿಳಿಸಿದ್ದಾರೆ.