ಕೊಕ್ಕಡ: ಅಣ್ಣ,ತಮ್ಮರಿಬ್ಬರು ಜೇನುನೊಣದ ಕುಟುಂಬಕ್ಕಾಗಿ ಕಾಡಿಗೆ ತೆರಳಿದ್ದಾಗ ಅಣ್ಣನಿಗೆ ವಿಷದ ಹಾವು ಕಚ್ಚಿದ್ದನ್ನು ಕಂಡ ತಮ್ಮ ತನ್ನ ಬಾಯಿಯಿಂದ ವಿಷ ಹೀರಿ ಅಣ್ಣನನ್ನು ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ಕೊಕ್ಕಡ ಗ್ರಾಮದ ಮುಂಡೂರುಪಲ್ಕೆಯಲ್ಲಿ ಮೇ.30ರಂದು ನಡೆದಿದೆ.
ತಮ್ಮ ತನ್ನ ಪ್ರಾಣವನ್ನೂ ಲೆಕ್ಕಿಸದೆ ಅಣ್ಣನ ಪ್ರಾಣ ಉಳಿಸಿದ ಕಾರ್ಯಕ್ಕೆ ಎಲ್ಲೆಡೆಯು ಮೆಚ್ಚುಗೆ ವ್ಯಕ್ತವಾಗಿದೆ. ಇವರು ಕೊಕ್ಕಡ ಗ್ರಾಮದ ಮುಂಡೂರುಪಲ್ಕೆ ನಿವಾಸಿಗಳಾದ ತಿಮ್ಮಯ್ಯ ಮಲೆಕುಡಿಯ ಮತ್ತು ಶ್ರೀಮತಿ ಸುಧಾರವರ ಪುತ್ರರಾದ ಗಣೇಶ್ ಮತ್ತು ಸಂತೋಷ್ ಅವರು ಪಕ್ಕದ ಕಾಡಿಗೆ ಜೇನು ಕುಟುಂಬ ಸಂಗ್ರಹಕ್ಕಾಗಿ ತೆರಳಿದ್ದರು. ಈ ವೇಳೆ ಸಂತೋಷ್ ಅವರಿಗೆ ಕಾಡಿನಲ್ಲಿ ವಿಷದ ಹಾವು ಕಚ್ಚಿತ್ತು. ಇದನ್ನು ನೋಡಿದ ತಮ್ಮ ಗಣೇಶ್‌ರವರು ತನ್ನ ಬಾಯಿಯಿಂದ ವಿಷವನ್ನು ಹೀರಿದ್ದಾರೆ. ಈ ಮೂಲಕ ತನ್ನ ಪ್ರಾಣಾಪಾಯವನ್ನೂ ಲೆಕ್ಕಿಸದೆ ಅಣ್ಣನ ಪ್ರಾಣ ಉಳಿಸಿದ್ದಾರೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗಣೇಶ್ ಪದವಿ ಸಂದರ್ಭದಲ್ಲಿ ಎನ್‌ಸಿಸಿ ವಿದ್ಯಾರ್ಥಿ:
ಗಣೇಶ್ ಬೆಳ್ತಂಗಡಿ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಸಿಸಿ ಕ್ಯಾಡೆಟ್‌ನ ವಿದ್ಯಾರ್ಥಿಯಾಗಿದ್ದರು. ಪದವಿ ಪಡೆದ ಬಳಿಕ ಕೃಷಿಯೊಂದಿಗೆ ಉಜಿರೆ ರುಡ್‌ಸೆಟ್‌ನಲ್ಲಿ ಜೇನುಕೃಷಿ ತರಬೇತಿ ಪಡೆದು ಜೇನುಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಬಳಿ ಇರುವ ಜೇನು ಪೆಟ್ಟಿಗೆಗೆ ಮನೆ ಸಮೀಪದಲ್ಲಿರುವ ಕಾಡಿನಲ್ಲಿ ಜೇನುನೊಣದ ಕುಟುಂಬವನ್ನು ಹುಡುಕಿ ಪೆಟ್ಟಿಗೆಯಲ್ಲಿ ಕೂರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೇ.30ರಂದು ಅಣ್ಣ ಸಂತೋಷ್ ಹಾಗೂ ತಮ್ಮ ಗಣೇಶ್ ತಮ್ಮ ಮನೆಯ ಸಮೀಪದ ಕಾಡಿಗೆ ಜೇನುನೊಣದ ಕುಟುಂಬ ಹುಡುಕಾಟಕ್ಕೆ ತೆರಳಿದ್ದರು. ಕಾಡಿನಲ್ಲಿ ಸುಮಾರು ಎರಡೂವರೆ ಕಿಲೋ ಮೀಟರ್ ದೂರ ಸಾಗಿದ್ದರು. ದಟ್ಟವಾದ ಕಾಡಿನಲ್ಲಿ ಪೊದೆ, ಗಿಡಗಳನ್ನು ಸರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಾಡಿನ ಮಧ್ಯೆ ಅಣ್ಣ ಸಂತೋಷ್ ಅವರಿಗೆ ಗಿಡವೊಂದರಲ್ಲಿದ್ದ ವಿಷಪೂರಿತ ಮಲಬಾರ್ ಗುಳಿ ಮಂಡಲ ಹಾವು ಕೈ ಬೆರಳಿಗೆ ಕಚ್ಚಿತ್ತು. ಸ್ವಲ್ಪ ಸಮಯದಲ್ಲೇ ಅವರು ವಿಷವೇರಿ ತೀವ್ರ ಅಸ್ವಸ್ಥಗೊಂಡರು. ತಮ್ಮ ಗಣೇಶ್ ಅವರಿಗೆ ಈ ವಿಷಯ ಗೊತ್ತಾಗುತ್ತಲೇ ಅವರು ತಕ್ಷಣ ಹಾವು ಕಚ್ಚಿದ ಜಾಗದ ಮೇಲೆ ಕೈಗೆ ಬಟ್ಟೆ ಕಟ್ಟಿದರು. ಹಾವು ಕಚ್ಚಿ ಗಾಯಗೊಂಡ ಅಣ್ಣನ ಬೆರಳಿನ ಜಾಗವನ್ನು ಬಾಯಿಯಿಂದ ಹೀರಿ ಹಾವಿನ ವಿಷವನ್ನು ಮೂರು, ನಾಲ್ಕು ಬಾರಿ ತೆಗೆದು ಪ್ರಥಮ ಚಿಕಿತ್ಸೆ ನೀಡಿದರು. ನಿತ್ರಾಣಗೊಂಡು ನಡೆದು ಬರಲು ಸಾಧ್ಯವಾಗದೆ ಕುಸಿದು ಬಿದ್ದಿದ್ದ ಅಣ್ಣನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸುಮಾರು ಎರಡೂವರೆ ಕಿ.ಮೀ ಕಾಡಿನಲ್ಲಿ ನಡೆದು ಬಂದ ಗಣೇಶ್ ಅವರು ತಮ್ಮ ಮನೆಯವರಿಗೆ ವಿಷಯ ತಿಳಿಸಿದರು. ನಂತರ ನಾಟಿ ವೈದ್ಯರಿಂದ ಚಿಕಿತ್ಸೆ ಕೊಡಿಸಿದರು.
ಸಂತೋಷ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಗಣೇಶ್ ಅವರ ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಅಣ್ಣ ಸಂತೋಷ್ ಅವರ ಜೀವ ಉಳಿದಿದೆ.