ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಅವರಿಂದಲೇ ಶುಚಿಗೊಳಿಸಿದ ಕೊಳ್ನಾಡಿನ ಯುವಕರು

ಶೇರ್ ಮಾಡಿ

ವಿಟ್ಲ : ಕೊಳ್ನಾಡು ಗ್ರಾಮದ ಕಳೆಂಜಿಮಲೆ ರಕ್ಷಿತಾರಣ್ಯದ ಮೂಲಕ ಕನ್ಯಾನ ಸಂಪರ್ಕ ರಸ್ತೆ ಕೆಲ ದಿನಗಳಿಂದ ನರಕ ಸದೃಶವಾಗಿತ್ತು. ಕುಡ್ತಮುಗೇರು, ಮಂಕುಡೆ, ಕುದ್ರಿಯ, ಕುಳಾಲು ಪರಿಸರದ ಹಸುಗಳು, ಆಡುಗಳು, ನಾಯಿ-ಬೆಕ್ಕುಗಳೆಲ್ಲಾ ತ್ಯಾಜ್ಯ ತಿಂದು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದವು. ದುರ್ವಾಸನೆ ಬೀರುತ್ತಿತ್ತು.

ತ್ಯಾಜ್ಯ ಎಸೆಯುವ ದುಷ್ಕರ್ಮಿಗಳ ಅಮಾನವೀಯ ಕ್ರಮದಿಂದ ಪ್ರಕೃತಿ ಪ್ರೇಮಿಗಳು ಆಕ್ರೋಶಗೊಂಡಿದ್ದಲ್ಲದೇ ದುಷ್ಕರ್ಮಿಗಳಿಗೆ ತಕ್ಕಪಾಠ ಕಲಿಸಲು ತಯಾರಾಗಿದ್ದರು. ಮಂಗಳವಾರ ಮುಸ್ಸಂಜೆ ಗೂಡ್ಸ್ ಟೆಂಪೋದಲ್ಲಿ ಬಂದ ಇಬ್ಬರು ದುರ್ನಾತ ಬರುತ್ತಿದ್ದ ತ್ಯಾಜ್ಯಗಳ ಮೂಟೆಗಳನ್ನು ರಸ್ತೆ ಬದಿ ಎಸೆದು ಎಸ್ಕೇಪ್ ಆಗುತ್ತಿದ್ದಂತೆ ಸ್ಥಳೀಯರೋಬ್ಬರು ಮೊಬೈಲ್ ಮೂಲಕ ಚಿತ್ರೀಕರಿಸಿದ್ದರು.

ವೀಡಿಯೋ ಹರಿದಾಡುತ್ತಿದ್ದಂತೆ ತ್ಯಾಜ್ಯ ಎಸೆದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿದ ಪ್ರಕೃತಿ ಪ್ರೇಮಿ ಯುವಕರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದರು. ಸ್ಥಳೀಯ ಯುವಕರು ತ್ಯಾಜ್ಯ ಎಸೆದವರನ್ನು ಸ್ಥಳಕ್ಕೆ ಕರೆಯಿಸಿ ಅವರಿಂದಲೇ ತ್ಯಾಜ್ಯಗಳ ಮೂಟೆಗಳನ್ನು ಪುನ: ಟೆಂಪೋ ಗೆ ತುಂಬಿಸಿ ರಕ್ಷಿತಾರಣ್ಯ ಪರಿಸರವನ್ನು ಶುಚಿಗೊಳಿಸಿದ್ದಾರೆ. ಪ್ರಕೃತಿ ಪ್ರೇಮಿಗಳ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಸಿಬಂದಿಗಳು ಸಾಥ್ ನೀಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

error: Content is protected !!