ನೆಲ್ಯಾಡಿ: ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ- ಸಂಘ ಸಂಸ್ಥೆಗಳ ಮುಖಂಡರ ಸಭೆ – ಸಂಸದರ ಬೇಟಿಗೆ ನಿರ್ಧಾರ

ಶೇರ್ ಮಾಡಿ

ನೆಲ್ಯಾಡಿ: ರಾ.ಹೆ 75ರ ಬಿ.ಸಿ ರೋಡ್ ನಿಂದ ಅಡ್ಡ ಹೊಳೆವರೆಗೆ ಹೆದ್ದಾರಿಯ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು. ಕಾಮಗಾರಿಯನ್ನು ಸಮರ್ಪಕವಾಗಿ ನಡೆಸದೇ ಇರುವುದರಿಂದ ವರ್ತಕರಿಗೆ, ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದ್ದು ಈ ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದು ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಲು ಜೂನ್ 10 ರಂದು ನೆಲ್ಯಾಡಿ ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ ಕೆ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ಡಿಯೋನ್ ಸ್ಕ್ವೇರ್ ನಲ್ಲಿ ನಡೆದ ವರ್ತಕರ, ಕಟ್ಟಡ ಮಾಲಕರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.

ನೆಲ್ಯಾಡಿ ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ ಕೆ ವರ್ಗೀಸ್ ಅವರು ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ಎರಡು ಬದಿ ಸರ್ವಿಸ್ ರಸ್ತೆಯನ್ನು ಮಾಡಲಾಗಿದ್ದು ಇದರ ಬದಿಯಲ್ಲಿ ನಿರ್ಮಿಸಿದ ಚರಂಡಿಯು ಸಮರ್ಪಕವಾಗಿ ನಿರ್ಮಾಣ ಮಾಡದೆ ಇರುವ ಬಗ್ಗೆ ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ, ಹಾಗಾಗಿ ಮುಂದಿನ ಹೋರಾಟದ ಕುರಿತಂತೆ ಚರ್ಚಿಸಲು ನೆಲ್ಯಾಡಿ ವ್ಯಾಪ್ತಿಯ ಸುಮಾರು 17 ಸಂಘ ಸಂಸ್ಥೆಯ ಮುಖಂಡರುಗಳನ್ನು, ವರ್ತಕರನ್ನು, ಕಟ್ಟಡ ಮಾಲಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ ಬಂದಿರುವ ಅಭಿಪ್ರಾಯದಂತೆ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಟ್ಟಡ ಮಾಲಕರ ಸಂಘದ ನಿಕಟ ಪೂರ್ವಾಧ್ಯಕ್ಷ ಒ ಜಿ ನೈನಾನ್ ಅವರು ಅವರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ಹೆದ್ದಾರಿ ಪ್ರಾದಿಕಾರದವರೊಂದಿಗೆ ಮಾಡಿದ ಮನವಿಗಳ ಬಗ್ಗೆ ಹಾಗೂ ಬೆಳವಣಿಗೆಗಳ ಕುರಿತಾಗಿ ತಿಳಿಸಿದರು.
ವೇದಿಕೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಕಟ್ಟಡ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಕೆ.ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರ್ವೀಸ್ ರಸ್ತೆ ಏಳೂವರೇ ಮೀಟರ್‌ಗೆ ವಿಸ್ತರಣೆ, ಬೆಥನಿ ವಿದ್ಯಾಸಂಸ್ಥೆಯ ಬಳಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಕ್ರಾಸಿಂಗ್ ನಿರ್ಮಿಸುವಂತೆ, ರಿಕ್ಷಾ,ಜೀಪು ಪಾರ್ಕಿಂಗ್ ವ್ಯವಸ್ಥೆ, ಅಂಡರ್‌ಪಾಸ್‌ನಲ್ಲಿ ವಾಹನ ನಿಲುಗಡೆ ಹಾಗೂ ವ್ಯಾಪಾರಕ್ಕೆ ಅವಕಾಶ ನೀಡಬಾರದು, ಚರಂಡಿಯೊಳಗಿನ ತ್ಯಾಜ್ಯ ಹಾಗೂ ಇತರೇ ಕಸಕಡ್ಡಿಗಳ ತೆರವು, ಚರಂಡಿಗೆ ಮುಚ್ಚಳ ಅಳವಡಿಕೆ ಸೇರಿದಂತೆ ಇತರೇ ಸಮಸ್ಯೆಗಳ ಕುರಿತು ಸದಸ್ಯರು ಸಭೆಯ ಗಮನ ಸೆಳೆದರು.

ಸಂಸದ ನಳಿನ್‌ಕುಮಾರ್ ಕಟೀಲ್ ಭೇಟಿಗೆ ನಿರ್ಧಾರ: ಅಸಮರ್ಪಕ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಸಮಸ್ಯೆಗಳ ಬಗ್ಗೆ ಸಂಸದ ನಳಿನ್‌ ಕುಮಾರ್ ಕಟೀಲ್ ಅವರ ಗಮನಕ್ಕೆ ತರುವಂತೆ ಸಭೆಯಲ್ಲಿ ಅಭಿಪ್ರಾಯ ಬಂತು. ಈ ಹಿನ್ನೆಲೆಯಲ್ಲಿ ಸಂಸದ ನಳಿನ್‌ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದು. ಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಖುದ್ದು ನೆಲ್ಯಾಡಿಗೆ ಬಂದು ಇಲ್ಲಿನ ಸಮಸ್ಯೆ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕೇಳಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ.ಮುರಳೀಧರ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಕೆ.ಪಿ.ತೋಮಸ್, ಶಿವಣ್ಣ ಪಿ.ಹೆಗ್ಡೆ, ಕಟ್ಟಡ ಮಾಲಕರಾದ ಮಹಮ್ಮದ್ ಪುತ್ತು, ಸತೀಶ್ ಭಟ್ ದುರ್ಗಾಶ್ರೀ, ಮಿಥುನ್ ಶಿವಕೃಪಾ, ರಾಮಣ್ಣ ಗೌಡ ನೆಲ್ಯಾಡಿ, ಗಣೇಶ್ ಪೊಸೊಳಿಕೆ, ಜಯಕುಮಾರ್ ಶಾರದಾ ಫ್ಯಾನ್ಸಿ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಸಲಾಂ ಪಡುಬೆಟ್ಟು, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಲೋಕೇಶ್ ಬಾಣಜಾಲು, ಉದಯಕುಮಾರ್ ದೋಂತಿಲ, ರವಿಪ್ರಸಾದ್ ಗುತ್ತಿನ ಮನೆ, ಜೋಸ್ ಕೆ.ಜೆ. ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಕಟ್ಟಡ ಮಾಲಕರ ಸಂಘದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು ಸ್ವಾಗತಿಸಿ, ನಿರೂಪಿಸಿದರು, ಕಟ್ಟಡ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಕೆ.ರಶ್ಮಿ ವಂದಿಸಿದರು.

Leave a Reply

error: Content is protected !!