ನೆಲ್ಯಾಡಿ: ರಸ್ತೆ ನಿರ್ಮಾಣದಲ್ಲಿ ತಕರಾರು; ಜಾತಿ ನಿಂದನೆ; ದೂರು ದಾಖಲು

ಶೇರ್ ಮಾಡಿ

ನೆಲ್ಯಾಡಿ: ರಸ್ತೆಯಲ್ಲಿ ತೆಗೆಯಲಾಗಿದ್ದ ಹೊಂಡವನ್ನು ಜೆಸಿಬಿ ಸಹಾಯದಿಂದ ಮುಚ್ಚುವ ವೇಳೆ ಟಿಪ್ಪರ್ ಲಾರಿಗಳನ್ನು ಅಡ್ಡವಿಟ್ಟು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ನೆಲ್ಯಾಡಿ ಗ್ರಾಮದ ಮೊರಂಕಳ ನಿವಾಸಿ ಸದಾನಂದ ನಾಯ್ಕ ಎಂಬವರು ನೀಡಿದ ದೂರಿನಂತೆ ವಿ.ಜೆ.ಜೋಸೆಫ್ ಯಾನೆ ಕಾಟಿ ಬೇಬಿ, ಪ್ರಿನ್ಸ್, ಸಂತೋಷ ಹಾಗೂ ಅಜಯ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸದಾನಂದ ನಾಯ್ಕ ಅವರ ಮನೆಗೆ ಹೋಗುವ ರಸ್ತೆಗೆ ಜೂ.7ರಂದು ಹೊಂಡ ತೆಗೆಯಲಾಗಿದ್ದು ಈ ಹೊಂಡ ಮುಚ್ಚುವುದಕ್ಕಾಗಿ ಅವರು ಜೂ.11ರಂದು ಸಂಜೆ ಜೆಸಿಬಿ ತರಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿ.ಜೆ ಜೊಸೇಫ್ ಯಾನೆ ಕಾಟಿ ಬೇಬಿ ಎಂಬವರ ಕೆಲಸದಾಳುಗಳು ಎರಡು ಟಿಪ್ಪರ್ ಲಾರಿಯನ್ನು ತಂದು ಜೆಸಿಬಿಯನ್ನು ತೆಗೆಯದಂತೆ ಅಡ್ಡವಾಗಿ ನಿಲ್ಲಿಸಿದ್ದರು. ಈ ಬಗ್ಗೆ ಸದಾನಂದ ನಾಯ್ಕ್ ಹಾಗೂ ಅವರ ತಂಗಿ ವಾರಿಜ ಆಕ್ಷೇಪಿಸಿದ್ದರು. ಈ ವೇಳೆ ಆರೋಪಿಗಳು ವಾರಿಜ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ.

ವಿ.ಜೆ.ಜೊಸೇಫ್‌ರವರು ಜೆಸಿಬಿ ಚಾಲಕ ಕುಮಾರ್‌ರವರ ಫೋನ್‌ಗೆ ಕರೆ ಮಾಡಿ ಸದಾನಂದ ನಾಯ್ಕ್‌ರವರ ಬಾವ ಮೋಹನ ನಾಯ್ಕರವರಿಗೆ ಫೋನ್ ಕೊಡುವಂತೆ ತಿಳಿಸಿ ಅವರಿಗೂ ಫೋನ್‌ನಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ಕುರಿತಂತೆ ಸದಾನಂದ ನಾಯ್ಕ್ ಅವರು ನೀಡಿದ ದೂರಿನಂತೆ ವಿ.ಜೆ.ಜೋಸೆಫ್ ಯಾನೆ ಕಾಟಿ ಬೇಬಿ, ಪ್ರಿನ್ಸ್, ಸಂತೋಷ ಹಾಗೂ ಅಜಯ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಕಲಂ: 341, 504, 506 ಜೊತೆಗೆ 34 ಐಪಿಸಿ ಮತ್ತು ಕಲಂ:3(1)(r)(s) ಕಲಂ:3(1)(r)(s) SC/STAmendment Act 2015 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!