ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಹತ್ತನೇ ತರಗತಿಗಳು ರಾಜ್ಯಾದ್ಯಂತ ಬೆಳಗ್ಗೆ 9.30ಕ್ಕೆ ಆರಂಭಗೊಳ್ಳುತ್ತಿರುವುದಕ್ಕೆ ಹಲವೆಡೆ ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಹಳೆಯ ವೇಳಾಪಟ್ಟಿಗಿಂತ ಸುಮಾರು ಒಂದು ತಾಸು ಮೊದಲೇ ಶಾಲೆ ಆರಂಭಗೊಳ್ಳುತ್ತಿದ್ದು, ಮಕ್ಕಳ ಚಟುವಟಿಕೆಗಳಿಗೆ ಅಡ್ಡಿಯಾಗುವುದರ ಜತೆಗೆ ಸುರಕ್ಷೆಯ ಪ್ರಶ್ನೆಯೂ ಎದುರಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.
ರಾಜ್ಯ ಸರಕಾರ ನೀಡಿರುವ ಸಲಹಾತ್ಮಕ ವೇಳಾಪಟ್ಟಿಯನ್ನೇ ಚಾಚೂ ತಪ್ಪದೆ ಪಾಲಿಸಬೇಕೆಂದು ಡಿಡಿಪಿಐಗಳು ಒತ್ತಾಯ ಹೇರುತ್ತಿರುವುದು ಹಾಗೂ ಈ ಸಲಹಾತ್ಮಕ ವೇಳಾಪಟ್ಟಿಯನ್ನು ಸ್ಥಳೀಯ ಪರಿಸ್ಥಿತಿಯನ್ನು ಗಮನಿಸದೆ ಜಾರಿಗೊಳಿಸುತ್ತಿರುವುದೇ ವಿರೋಧಕ್ಕೆ ಪ್ರಮುಖ ಕಾರಣ.
ಹೊಸ ವೇಳಾಪಟ್ಟಿಯಲ್ಲೇನಿದೆ?
ಹೊಸ ವೇಳಾಪಟ್ಟಿಯ ಪ್ರಕಾರ ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಬೆಳಗ್ಗೆ 9.30ರಿಂದ 9.50ರ ತನಕ ಸಿದ್ಧತೆ ಅವಧಿ ಹಾಗೂ 9.50ರಿಂದ 10ರ ವರೆಗೆ ಕ್ಷೀರ ಭಾಗ್ಯದ ಅವಧಿ ಎಂದು ನಿಗದಿಪಡಿಸಲಾಗಿದೆ. 10ರಿಂದ ಸಂಜೆ 4.20ರ ತನಕ ಮಧ್ಯಾಹ್ನದ ಬಿಸಿಯೂಟದ ಅವಧಿ ಸೇರಿದಂತೆ ಹತ್ತು ನಿಮಿಷಗಳ ಎರಡು ಅಲ್ಪ ವಿರಾಮ ಒಳಗೊಂಡು ತಲಾ 40 ನಿಮಿಷಗಳ 8 ಅವಧಿಗಳಲ್ಲಿ ಶಾಲಾ ಚಟುವಟಿಕೆ ನಡೆಯುತ್ತದೆ. ಅದೇ ರೀತಿ ಎಂಟರಿಂದ ಹತ್ತನೇ ತರಗತಿ ಮಕ್ಕಳಿಗೆ 9.30ರಿಂದ 10ರ ವರೆಗೆ ಸಿದ್ಧತೆ ಅವಧಿ, ಬಳಿಕ ಮಧ್ಯಾಹ್ನದ ಬಿಸಿಯೂಟದ ಅವಧಿ ಸೇರಿದಂತೆ ಹತ್ತು ನಿಮಿಷಗಳ ಎರಡು ಅಲ್ಪ ವಿರಾಮ ಒಳಗೊಂಡು ತಲಾ 45 ನಿಮಿಷಗಳ ಒಟ್ಟು 7 ಅವಧಿ ಇರುವ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದೆ.
ಈ ವೇಳಾಪಟ್ಟಿ ಸಲಹಾತ್ಮಕ ಸ್ವರೂಪದಲ್ಲಿದ್ದು, ಆಯಾ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಡಿಡಿಪಿಐ) ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಶಾಲಾರಂಭ ಮತ್ತು ಅಂತ್ಯಗೊಳ್ಳುವ ಸಮಯದಲ್ಲಿ ಬದಲಾವಣೆ ಮಾಡುವ ಅಧಿಕಾರ ಹೊಂದಿದ್ದಾರೆ. ಆದರೆ ಬಹುತೇಕ ಜಿಲ್ಲೆಗಳ ಡಿಡಿಪಿಐಗಳು ಈ ಸಲಹಾತ್ಮಕ ವೇಳಾಪಟ್ಟಿಯನ್ನು ಯಥಾವತ್ ಜಾರಿಗೊಳಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ತುಮಕೂರು, ವಿಜಯಪುರ, ಬೀದರ್, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವೇಳಾಪಟ್ಟಿ ಬದಲಾಯಿಸಬೇಕು ಎಂಬುದಾಗಿ ಶಿಕ್ಷಕರು, ಹೆತ್ತವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮನವಿ ಸಲ್ಲಿಕೆಗೆ ಚಿಂತನೆ
ಶಾಲೆಗಳು ಬೇಗನೆ ಆರಂಭಗೊಳ್ಳುವುದಕ್ಕೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆ ಆರಂಭದ ಅವಧಿಯನ್ನು ಏಕಪ್ರಕಾರವಾಗಿ ನಿರ್ಧರಿಸಬಾರದು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸಬೇಕು. ಆದರೆ ಸರಕಾರ ನೀಡಿರುವ ಸಲಹಾತ್ಮಕ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಡಿಡಿಪಿಐಗಳು ಒತ್ತಡ ಹೇರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸ್ಥಳೀಯ ಮಟ್ಟದಲ್ಲೇ ಶಾಲಾ ವೇಳಾಪಟ್ಟಿ ನಿರ್ಧಾರಕ್ಕೆ ಅವಕಾಶ ನೀಡುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುತ್ತೇವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.