ಉಡುಪಿ: ಭಾರೀ ಗಾಳಿ ಮಳೆಗೆ ರಸ್ತೆ ಬದಿಯ ಮರ ಉರುಳಿ ಬಿದ್ದಿದ್ದು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಜಿಲ್ಲೆಯ ಹಾಲಾಡಿ ರಸ್ತೆಯಲ್ಲಿ ನಡೆದಿದೆ.
ಬರಿಗಾಲ ಸಂತ ಎಂದೇ ಖ್ಯಾತಿ ಪಡೆದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಹಾಲಾಡಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಭಾರೀ ಗಾಳಿ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿತ್ತು.
ಅದೇ ಮಾರ್ಗವಾಗಿ ತೆರಳುತ್ತಿದ್ದ ಗುರುರಾಜ್ ಗಂಟಿಗೊಳೆ ಮರ ತೆರವು ಮಾಡಲು ಸ್ಥಳೀಯರಿಗೆ ನೆರವಾಗಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮತ್ತೊಂದು ಮರ ಏಕಾಏಕಿ ಶಾಸಕರ ಮೇಲೆ ಉರುಳಿ ಬಿದ್ದಿದೆ.
ಸಾಮಾನ್ಯ ಕಾರ್ಯಕರ್ತರಂತೆ ಶಾಸಕ ಗುರುರಾಜ್ ಗಂಟಿಹೊಳೆ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ತೆರವು ಮಾಡುತ್ತಿದ್ದರು. ಮರ ಉರುಳುವ ಸದ್ದಿಗೆ ಎಚ್ಚೆತ್ತ ಶಾಸಕ, ಕೂಡಲೇ ಅಲ್ಲಿಂದ ಹಿಂದೆ ಸರಿದಿದ್ದಾರೆ. ಇದರಿಂದ ಅನಾಹುತವೊಂದು ತಪ್ಪಿದೆ.