ಇಲಾಖೆಯಲ್ಲಿ ಕರ್ತವ್ಯ, ಸೇವೆ ಜೊತೆಯಲ್ಲಿ ಹೋದಲ್ಲಿ ಬಡವರಿಗೆ ನ್ಯಾಯ ಸಿಗುವ ಕೆಲಸ ಆಗುತ್ತದೆ- ಶಾಸಕ ಅಶೋಕ್ ಕುಮಾರ್ ರೈ

ಶೇರ್ ಮಾಡಿ

ಪುತ್ತೂರು: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಒಂದಕ್ಕೊಂದು ಕೊಂಡಿಯಂತೆ ಕೆಲಸ ಮಾಡಿದಾಗ ಜನರಿಗೆ ಉತ್ತಮ ಸೇವೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಕರ್ತವ್ಯ ಮತ್ತು ಸೇವೆ ಜೊತೆಯಲ್ಲಿ ಹೋದಲ್ಲಿ ಮಾತ್ರ ಬಡವರಿಗೆ ನ್ಯಾಯ ಸಿಗುವ ಕೆಲಸ ಆಗುತ್ತದೆ. ಕರ್ತವ್ಯದ ಜೊತೆ ಸೇವಾ ಮನೋಭಾವ ಇರಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.

ಅವರು ಪುತ್ತೂರು ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆಯ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಂದಾಯ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು.
ಭೂಮಿಯನ್ನು ರಕ್ಷಿಸುವ ಕೆಲಸವನ್ನು ಪೊಲೀಸರು ಮಾಡಿದರೆ ಕಂದಾಯ ಇಲಾಖೆಯ ಅಧಿಕಾರಿಗಳು ಅದರ ಸಮರ್ಪಕ ನಿರ್ವಹಣೆಯನ್ನು ಮಾಡುತ್ತಾರೆ. ಈ ವಿಚಾರದಲ್ಲಿ ಕರ್ತವ್ಯದ ಜೊತೆಗೆ ಸೇವಾ ಮನೋಭಾವನೆ ಇರಬೇಕು. ಬಡವರು ಇಲಾಖೆಗೆ ಬಂದಾಗ ತಡಮಾಡದೆ ಅವರಿಗೆ ಸೇವೆ ನೀಡಬೇಕು. ಕಾನೂನು ತೊಡಕುಗಳಿದ್ದಲ್ಲಿ ಸರಿಪಡಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳ ಸ್ಪಂದನೆ ಇರಬೇಕು. ಅಧಿಕಾರಿಗಳ ಸಮರ್ಪಕ ಸ್ಪಂದನೆ ಸಿಗದಿದ್ದಾಗ ಜನಪ್ರತಿನಿಧಿಗಳು ಯಾವ ಕಾರ್ಯ ಮಾಡಲೂ ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಮಾತನಾಡಿ ಕಂದಾಯ ಇಲಾಖೆಯಲ್ಲಿ ಒಬ್ಬ ವ್ಯಕ್ತಿಯ ಜನನ ದಿಂದ ಮರಣದ ತನಕ ಎಲ್ಲಾ ಸೇವೆಗೆ ಅವಕಾಶವಿದೆ. ಜನರಿಗೆ ಸೇವೆ ಮಾಡುವುದು ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯ ವಾಗಿದೆ. ಜು.1ರಿಂದ ಹೊಸ ವರ್ಷದಂತೆ ಎಲ್ಲಾ ಕೆಲಸ ಉತ್ತಮ ರೀತಿಯಲ್ಲಿ ನಡೆಯಲಿದೆ ಎಂದರು.
ಪುತ್ತೂರು ತಹಶೀಲ್ದಾರ್ ಜೆ.ಶಿವಶಂಕರ್, ಭೂಮಾಪನ ಇಲಾಖೆಯ ಸೂಪರ್ ವೈಸರ್ ಮಹೇಶ್ ಕುಮಾರ್, ಉಪಖಜಾನೆಯ ಸಹಾಯಕ ನಿರ್ದೇಶಕ ಮಹೇಶ್ ಎಸ್, ಉಪನೋಂದವಣಾಧಿಕಾರಿ ಸತ್ಯೇಶ್ ಪಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪಡ್ನೂರು ಗ್ರಾಮ ಸಹಾಯಕ ಬಾಲಕೃಷ್ಣ ಗೌಡ, ಗ್ರೂಪ್ ಡಿ ಸಿಬ್ಬಂದಿ ರಾಧಾಕೃಷ್ಣ, ಕಬಕ ಗ್ರಾಮ ಆಡಳಿತ ಅಧಿಕಾರಿ ಜಂಗಪ್ಪ, ತಾಲೂಕು ಕಚೇರಿಯ ಸಿಬ್ಬಂದಿ ಚೈತ್ರ ಡಿ ನಾಯಕ್ ಕಾರ್ಕಳ, ಸಹಾಯಕ ಆಯುಕ್ತರ ಕಚೇರಿಯಲ್ಲಿರುವ ಪ್ರತಿಕ್ಷಾ ಪಿ ಎಸ್, ಭೂಮಾಪನಾ ಇಲಾಖೆಯ ಮಂಜುನಾಥ ಟಿ ಎಸ್ ಅವರಿಗೆ ಪ್ರಶಂಸ ಪತ್ರ ನೀಡಿ ಅಭಿನಂದಿಸಲಾಯಿತು.
ಇಲಾಖೆಯ ಗ್ರೇಡ್ 2 ತಹಸೀಲ್ದಾರ್ ಲೋಕೇಶ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಗೋಪಾಲ್ ಅವರು ವಂದಿಸಿದರು. ಉಪತಹಸೀಲ್ದಾರ್ ಸುಲೋಚನಾ ನಿರೂಪಿಸಿದರು.

Leave a Reply

error: Content is protected !!