ವೈದ್ಯಕೀಯ ಕ್ಷೇತ್ರದಲ್ಲಿ ಆಗಾಗ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಅದಕ್ಕೊಂದು ಸೇರ್ಪಡೆ ಎಂಬಂತೆ ಇಸ್ರೇಲ್ ವೈದ್ಯರ ತಂಡವೊಂದು ಅಪಘಾತದಲ್ಲಿ ಮುರಿದಿದ್ದ 12 ವರ್ಷದ ಬಾಲಕನ ತಲೆಯನ್ನು ತೀರಾ ಅಸಾಮಾನ್ಯವಾದ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಿಸುವಲ್ಲಿ ಯಶಸ್ವಿಯಾಗಿದೆ.
ಸೈಕಲ್ ಸವಾರಿ ಮಾಡುತ್ತಿದ್ದ 12 ವರ್ಷದ ಸುಲೈಮಾನ್ ಹನನ್ ಎಂಬ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕುತ್ತಿಗೆಯ ಒಳಭಾಗ ಬೆನ್ನುಮೂಳೆಯು ಕಶೇರುಖಂಡದಿಂದ ಬೇರ್ಪಟ್ಟಿತ್ತು. ಈ ಸ್ಥಿತಿಯನ್ನು ವೈಜ್ಞಾನಿಕವಾಗಿ ಬೈಲೇಟರಲ್ ಅಟ್ಲಾಂಟೊ ಆಕ್ಸಿಪಿಟಲ್ ಜಾಯಿಂಟ್ ಡಿಸ್ ಲೊಕೇಶನ್ ಎಂದು ಕರೆಯಲಾಗುತ್ತದೆ.
ಅಪಘಾತ ಸಂಭವಿಸಿದ್ದ ಕೂಡಲೇ ಬಾಲಕನನ್ನು ತುರ್ತುಶಸ್ತ್ರಚಿಕಿತ್ಸೆಗಾಗಿ ಹದಾಸ್ಸ್ ಮೆಡಿಕಲ್ ಸೆಂಟರ್ ಗೆ ಏರ್ ಲಿಫ್ಟ್ ಮಾಡಲಾಗಿತ್ತು. ಇಸ್ರೇಲ್ ವೈದ್ಯರ ಮಾಹಿತಿ ಪ್ರಕಾರ, ಅಪಘಾತದಲ್ಲಿ ಬಾಲಕನ ಕುತ್ತಿಗೆ ಸಂಪೂರ್ಣವಾಗಿ ಕಶೇರುಖಂಡದಿಂದ ಬೇರ್ಪಟ್ಟಿತ್ತು ಎಂದು ತಿಳಿಸಿದ್ದಾರೆ.
ತಜ್ಞ ಮೂಳೆ ಶಸ್ತ್ರಚಿಕಿತ್ಸ ವೈದ್ಯ ಓಹಾದ್ ಇನಾವ್ ಹಾಗೂ ಅವರ ತಂಡ, ಹಲವು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಜಖಂಗೊಂಡಿದ್ದ ಕುತ್ತಿಗೆಯ ಒಳಭಾಗದಲ್ಲಿ ಹೊಸ ಪ್ಲೇಟ್ಸ್ ಗಳನ್ನು ಕೂರಿಸಲಾಗಿತ್ತು. ನಮ್ಮ ವೈದ್ಯಕೀಯ ಜ್ಞಾನ ಮತ್ತು ನೂತನ ತಂತ್ರಜ್ಞಾನದಿಂದಾಗಿ ಬಾಲಕನ ಜೀವ ಉಳಿಸಲು ಸಾಧ್ಯವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪವಾಡವಾದರೂ ಕೂಡಾ ಆ ಬಾಲಕ ಜೀವಂತವಾಗಿ ಉಳಿಯುವುದು ಕೇವಲ ಶೇ.50ರಷ್ಟು ಎಂಬುದಾಗಿ ವೈದ್ಯರು ನಂಬಿದ್ದರು. ಈ ಶಸ್ತ್ರಚಿಕಿತ್ಸೆ ನಡೆದದ್ದು ಕಳೆದ ತಿಂಗಳು..ಆದರೆ ಬಾಲಕನ ಆರೋಗ್ಯದ ಸ್ಥಿತಿಗತಿ ಗಮನಿಸಿದ ನಂತರ ವೈದ್ಯರು ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.
ತನ್ನ ಒಬ್ಬನೇ ಮಗನ ಪ್ರಾಣ ಉಳಿಸಿದ ವೈದ್ಯರಿಗೆ ತಂದೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿಮ್ಮ ವೃತ್ತಿ ಧರ್ಮ, ತಂತ್ರಜ್ಞಾನ ಮತ್ತು ತುರ್ತು ನಿರ್ಧಾರದ ಪರಿಣಾಮ ಮಗನ ಪ್ರಾಣ ಉಳಿಸಿದ ವೈದ್ಯರ ತಂಡಕ್ಕೆ ಬಾಲಕನ ತಂದೆ ಕೃತಜ್ಞತೆ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.