15,000 ಭಾರತೀಯರಿಗೆ ₹712 ಕೋಟಿ ಮೋಸ, ಬೃಹತ್‌ ವಂಚನೆ ಜಾಲ ಭೇದಿಸಿದ ಪೊಲೀಸರು

ಶೇರ್ ಮಾಡಿ

ಚೀನಾದ ಹ್ಯಾಂಡ್ಲರ್‌ಗಳು ಭಾಗಿಯಾಗಿರುವ ಬೃಹತ್‌ ವಂಚನೆ ಜಾಲವನ್ನು ಹೈದರಾಬಾದ್‌ ಪೊಲೀಸರು ಬಯಲಿಗೆಳೆದಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ವಂಚಕರು ಕನಿಷ್ಠ 15,000 ಭಾರತೀಯರಿಗೆ 700 ಕೋಟಿ ರೂ.ಗೂ ಹೆಚ್ಚು ವಂಚನೆ ಎಸಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ದುಬೈ ಮೂಲಕ ಚೀನಾಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದ್ದು, ಒಂದಿಷ್ಟು ಮೊತ್ತವನ್ನು ಲೆಬನಾನ್ ಮೂಲದ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ ನಿರ್ವಹಿಸುತ್ತಿರುವ ಖಾತೆಗೂ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ದೇಶದ ವಿವಿಧೆಡೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಹೈದರಾಬಾದ್ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆಗೆ ಇಳಿದಾಗ ಈ ಬೃಹತ್‌ ಹಗರಣ ಬಿಚ್ಚಿಕೊಂಡಿದೆ.
ಮೆಸೇಜಿಂಗ್ ಆ್ಯಪ್ ಮೂಲಕ ‘ರೇಟಿಂಗ್‌ ಮತ್ತು ರಿವ್ಯೂ’ ನೀಡುವ ಅರೆಕಾಲಿಕ ಉದ್ಯೋಗದ ಆಫರ್‌ ನೀಡಲಾಯಿತು. ಇದು ಅಸಲಿ ಎಂದು ನಂಬಿ ನಾನು ಅವರ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡೆ ಎಂದು ದೂರುದಾರ ವ್ಯಕ್ತಿ ಹೇಳಿದ್ದ.
ಆರಂಭದಲ್ಲಿ 1,000 ರೂಪಾಯಿಗಳ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಫೈವ್‌ ಸ್ಟಾರ್ ರೇಟಿಂಗ್ ನೀಡುವ ಸರಳವಾದ ಕೆಲಸವನ್ನು ನೀಡಲಾಯಿತು. ಇದಕ್ಕೆ 866 ರೂ. ಗಳಿಸಿದೆ. ಬಳಿಕ 25,000 ರೂ.ಗಳನ್ನು ಹೂಡಿಕೆ ಮಾಡಿದ ನಂತರ 20,000 ರೂ.ಗಳ ಲಾಭವನ್ನು ಗಳಿಸಿದೆ. ಆದರೆ ವ್ಯಾಲೆಟ್‌ನಲ್ಲಿ ಮಾತ್ರ ಹಣ ಕಾಣಿಸುತ್ತಿತ್ತು. ಲಾಭವನ್ನು ಹಿಂತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಬದಲಿಗೆ ಮತ್ತಷ್ಟು ಹಣ ಹೂಡುವಂತೆ ಮಾಡಲಾಗುತ್ತಿತ್ತು. ಹೀಗೆ 28 ಲಕ್ಷ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದೇನೆ ಎಂದು ಈತ ಪೊಲೀಸರ ಮೊರೆ ಹೋಗಿದ್ದ.
ತನಿಖೆಯ ಸಂದರ್ಭದಲ್ಲಿ ಸಂತ್ರಸ್ತ ಕಳೆದುಕೊಂಡಿದ್ದ 28 ಲಕ್ಷ ರೂಪಾಯಿಯನ್ನು ಆರು ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಹಣವನ್ನು ವಿವಿಧ ಭಾರತೀಯ ಬ್ಯಾಂಕ್ ಖಾತೆಗಳಿಗೆ ಮತ್ತು ಅಂತಿಮವಾಗಿ ದುಬೈಗೆ ವರ್ಗಾಯಿಸಲಾಗಿತ್ತು. ಈ ಹಣವನ್ನು ಕ್ರಿಪ್ಟೋಕರೆನ್ಸಿ ಖರೀದಿಸಲು ಬಳಸಲಾಗಿತ್ತು.
ಹಲವು ಹಂತಗಳ ವಂಚನೆಯಲ್ಲಿ ಬಂಧಿತ ವ್ಯಕ್ತಿಗಳಲ್ಲಿ ಒಬ್ಬನಾಗಿರುವ ಅಹಮದಾಬಾದ್‌ನ ನಿವಾಸಿಯು ಕೆಲವು ಚೀನಾದ ನಾಗರಿಕರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಈತ ಭಾರತೀಯ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅವರೊಂದಿಗೆ ಸಮನ್ವಯ ಸಾಧಿಸುತ್ತಿದ್ದ. ದೂರದಲ್ಲೇ ಕುಳಿತು ಇವರು ಆಪ್‌ಗಳ ಮೂಲಕ ದುಬೈ/ಚೀನಾದಿಂದ ಈ ಖಾತೆಗಳನ್ನು ನಿರ್ವಹಿಸಲು ಒಟಿಪಿಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಪ್ರಕಟಣೆ ಹೇಳಿದೆ.
ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು 65ಕ್ಕೂ ಹೆಚ್ಚು ಖಾತೆಗಳನ್ನು ಚೀನಾದ ನಾಗರಿಕರೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ 128 ಕೋಟಿ ರೂ. ವಹಿವಾಟು ನಡೆದಿದೆ.
ವಂಚನೆಯ ಹಣದಲ್ಲಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಟ್ರೆಷರಿಗೆ (ಯುಎಸ್‌ಡಿಟಿ ಕ್ರಿಪ್ಟೋ ಕರೆನ್ಸಿ) ಪರಿವರ್ತಿಸಿದ ಇತರ ಖಾತೆಗಳ ಮೌಲ್ಯ 584 ಕೋಟಿ ರೂಪಾಯಿಗಳಾಗಿದ್ದು, ಒಟ್ಟು 712 ಕೋಟಿ ರೂಪಾಯಿಗಳನ್ನು ವಂಚಕರು ವಂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

error: Content is protected !!