ವಿದ್ಯುತ್ತಿನಿಂದ ಶಾಕ್ ಹೊಡೆಯುವುದು ನೋಡಿದ್ದೇವೆ ಕೇಳಿದ್ದೇವೆ. ಆದರೆ ವಿದ್ಯುತ್ ಬಿಲ್ ನೋಡಿ ಗ್ರಾಹಕರೊಬ್ಬರು ಶಾಕ್ (ಗಾಬರಿ)ಆದ ಘಟನೆ ಪಟ್ರಮೆಯಲ್ಲಿ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಚ್ಚೆ ನಿವಾಸಿ ವಿಷ್ಣುಮೂರ್ತಿ ಎಡಪಡಿತ್ತಾಯರ ಮನೆ ಸಂಪರ್ಕದ ವಿದ್ಯುತ್ ಬಿಲ್ ಬರೋಬ್ಬರಿ 77,699 ಬಂದಿದೆ.
ಜು.29ರಂದು ವಿಷ್ಣುಮೂರ್ತಿ ಎಡಪಡಿತ್ತಾಯರ ಪುತ್ರ ರೋಹಿತ್ ಕುಮಾರ್‌ರವರು ತಮ್ಮ ಮೊಬೈಲ್‌ನ ನನ್ನ ಮೆಸ್ಕಾಂ ಆ್ಯಪ್ ನಿಂದ ವಿದ್ಯುತ್ ಬಿಲ್ಲನ್ನು ಪಾವತಿಸಲು ಹೋದರೆ 77,699 ತೋರಿಸಿತು. ಗಾಬರಿಗೊಂಡ ಅವರು ತಮ್ಮ ಪರಿಚಿತರಲ್ಲಿ ವಿಚಾರಿಸಿದ್ದಾರೆ. ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಇವರು ಜೂನ್ ತಿಂಗಳಿನ ರೀಡಿಂಗ್ 9509.00 ಆಗಿದ್ದು, ಜುಲೈ ತಿಂಗಳಿನಲ್ಲಿ 9506.00 ಎಂದಾಗಿದೆ. ಕಳೆದ ತಿಂಗಳಿಗಿಂತ ಈ ಬಾರಿ ಮೂರು ಯೂನಿಟ್ ಕಡಿಮೆ ಖರ್ಚಾಗಿದೆ ಎಂದು ಬಿಲ್ಲು ತೋರಿಸಿತು. ಇದು ಹೇಗೆ ಎಂದು ವಿಚಾರಿಸಿದಾಗ ಮೀಟರ್ ರೀಡಿಂಗ್‌ಗೆ ಬಂದ ರೀಡರ್ ತಪ್ಪಾದ ಸಂಖ್ಯೆಯನ್ನು ನಮೂದಿಸಿದ ಕಾರಣ ಅದು ಉಲ್ಟ ರೀಡಿಂಗ್ ಆಗಿ 100 ಪಟ್ಟು ಹೆಚ್ಚುವರಿ ಹಣ ಕಟ್ಟುವಂತೆ ಸೂಚಿಸಿದೆ. ಮೀಟರ್ ರೀಡಿಂಗ್‌ನವನ ಎಡವಟ್ಟಿನಿಂದ ಗ್ರಾಹಕರಾದ ವಿಷ್ಣುಮೂರ್ತಿ ಎಡಪಡಿತ್ತಾಯರ ಮನೆಯವರು ಗಲಿಬಿಲಿಗೊಂಡಿದ್ದರು.
ಪಟ್ರಮೆ ಪರಿಸರದಲ್ಲಿ ಈ ರೀತಿಯ ಎಡವಟ್ಟುಗಳು ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದು ಗ್ರಾಮೀಣ ಭಾಗದ ಗ್ರಾಹಕರು ಗೊಂದಲಕ್ಕೀಡಾಗುತ್ತಿರುವುದಾಗಿ ಕೇಳಿಬರುತ್ತಿದೆ.
ಇಂಥ ಘಟನೆ ನಡೆದಾಗ ಗ್ರಾಹಕರು ಹೆದರಬೇಕಾದ ಅವಶ್ಯಕತೆ ಇಲ್ಲ. ತಕ್ಷಣ ಮೆಸ್ಕಾಂ ಕಚೇರಿಗೆ ಮಾಹಿತಿ ನೀಡಿದಲ್ಲಿ ಈ ರೀತಿ ಸಮಸ್ಯೆಯನ್ನು ಸರಿಪಡಿಸಿ ಕೊಡುತ್ತೇವೆ. ಮೀಟರ್ ರೀಡರ್ ನ ತಾoತ್ರಿಕ ತಪ್ಪಿನಿಂದಾಗಿ ಈ ಥರ ಆಗಿದೆ.
ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಮೆಸ್ಕಾಂ ಉಜಿರೆ.