ಫೋಟೋ ತೆಗೆಯಲು ನದಿ ಬಂಡೆಯ ಬಳಿ ತೆರಳಿದ್ದ ನವದಂಪತಿ ಸೇರಿ ಮೂವರು ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ತಿರುವನಂತಪುರಂನಲ್ಲಿರುವ ಪಳ್ಳಿಕ್ಕಲ್ ನದಿಯಲ್ಲಿ ನಡೆದಿರುವುದು ವರದಿಯಾಗಿದೆ.
ಕೊಲ್ಲಂ ಮೂಲದ ಸಿದ್ದಿಕ್ (28),ಆಯೂರು ನಿವಾಸಿ ನೌಫಿಯಾ ನೌಶಾದ್ (21) ಹಾಗೂ ಅವರ ಸಂಬಂಧಿ ಅನ್ಸಲ್ ಖಾನ್ (19) ಮೃತರು.
ಜು.16 ರಂದು ಸಿದ್ದಿಕ್ -ನೌಫಿಯಾ ನೌಶಾದ್ ಅವರ ವಿವಾಹ ನಡೆದಿತ್ತು. ದಂಪತಿಯ ಸಂಬಂಧಿಯಾದ ಅನ್ಸಲ್ ಖಾನ್ ಅವರ ಮನೆಗೆ ಶನಿವಾರ (ಜು.29 ರಂದು) ಮನೆಗೆ ಬಂದಿದ್ದರು. ಇದೇ ವೇಳೆ ಮನೆ ಪಕ್ಕದ ನದಿ ತೀರದ ಪ್ರದೇಶಕ್ಕೆ ಸುತ್ತಾಟಕ್ಕೆಂದು ಅನ್ಸಲ್ ಅವರೊಂದಿಗೆ ನವದಂಪತಿ ತೆರಳಿದ್ದಾರೆ.
ಈ ವೇಳೆ ಫೋಟೋ ತೆಗೆಯಲು ಸಿದ್ದಿಕ್ -ನೌಫಿಯಾ ಪೋಸ್ ಕೊಟ್ಟಿದ್ದಾರೆ. ಸೆಲ್ಫಿ ಪೋಸ್ ಹಾಗೂ ಇತರ ಪೋಸ್ ನಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವಾಗ ಬಂಡೆಯಿಂದ ಜಾರಿ ನದಿಗೆ ಬಿದ್ದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಅನ್ಸಲ್ ಇಬ್ಬರನ್ನು ರಕ್ಷಣೆ ಮಾಡಲು ತಾನೂ ಕೂಡ ನದಿಗೆ ಹಾರಿದ್ದಾನೆ. ದುರದೃಷ್ಟವಶಾತ್ ಮೂವರು ಕೂಡ ನೀರಿನ ಸೆಳೆತಕ್ಕೆ ಪ್ರಾಣ ತೆತ್ತಿದ್ದಾರೆ.
ನದಿ ತೀರದ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ, ನದಿಯ ಬಂಡೆಯ ಪಕ್ಕದಲ್ಲಿದ್ದ ಚಪ್ಪಲಿ ಹಾಗೂ ಎರಡು ಬೈಕ್ ಗಳನ್ನು ನೋಡಿ ಶಂಕೆಯಿಂದ ಜನರನ್ನು ಕರೆದಿದ್ದಾನೆ. ಅಗ್ನಿಶಾಮಕದಳದವರು ಅದೇ ದಿನ ಸಂಜೆ ಅನ್ಸಲ್ ಅವರ ಮೃತದೇಹವನ್ನು ಹೊರ ತೆಗೆದಿದ್ದು, ಒಂದು ದಿನದ ಬಳಿಕ ನವದಂಪತಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ ಎಂದು ವರದಿ ತಿಳಿಸಿದೆ.