ಆಗಸ್ಟ್‌ 1ರಿಂದಲೇ ನಂದಿನಿ ಹಾಲಿನ ದರ 3 ರೂ. ಹೆಚ್ಚಳ! ಯಾವ ಹಾಲಿಗೆ ಎಷ್ಟು ಬೆಲೆ?

ಶೇರ್ ಮಾಡಿ

ಮೊದಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನತೆಗೆ ಇದೀಗ ಮತ್ತೊಂದು ಬಿಸಿ ತಟ್ಟಲಿದೆ. ಪೂರ್ವನಿಗದಿಯಂತೆ ನಾಳೆಯಿಂದಲೇ ಅಂದರೆ 2023ರ ಆಗಸ್ಟ್ 1ರಿಂದ ಹಾಲಿನ ದರ ಹೆಚ್ಚಳವಾಗಲಿದೆ. ಹಾಲು ಉತ್ಪಾದಕರ ಅಗತ್ಯತೆಗಳನ್ನು ಉಲ್ಲೇಖಿಸಿ ಆಗಸ್ಟ್ 1 ರಿಂದ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡುವ ಕುರಿತು ಈಗಾಗಲೇ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರನ್ವಯ ನಾಳೆಯಿಂದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.

ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕಡಿಮೆ ದರದಲ್ಲಿ ಹಾಲು ಮಾರಾಟವಾಗುತ್ತಿದ್ದು, ಇತರ ರಾಜ್ಯಗಳಲ್ಲಿ ಹಾಲು ಇನ್ನೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ 1ರಿಂದ ನಂದಿನಿ ಹಾಲು 39 ರೂ.ಗಳ ಬೆಲೆಯ ಹಾಲು (ಟೋನ್ಡ್) ಲೀಟರ್‌ಗೆ 42 ರೂ.ಗೆ ಮಾರಾಟವಾಗಲಿದೆ. ಇನ್ನುಳಿದಂತೆ ಹಾಲಿನ ಮಾದರಿಗೆ ಅನುಗುಣವಾಗಿ ಎಲ್ಲಾ ರೀತಿಯ ಹಾಲಿನ ದರದಲ್ಲಿ ಲೀಟರ್‌ಗೆ 3 ರೂ. ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಇನ್ನೂ ಹಾಲಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಸ್ತುತ, ಕರ್ನಾಟಕದಲ್ಲಿ ಅತ್ಯಂತ ಕಡಿಮೆ ದರದ ಹಾಲು ಮಾರಾಟವಾಗುತ್ತಿದೆ. ಆಗಸ್ಟ್ 1, 2023ರಿಂದ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಲಾಗಲಿದ್ದು, ಈ ಹೆಚ್ಚಳವು ಸರ್ಕಾರಕ್ಕೆ “ರೈತರಿಗೆ ಹಣವನ್ನು ನೀಡಲು” ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ದರ ಏರಿಕೆ ಬಳಿಕ ಹಾಲಿನ ದರ ಎಷ್ಟಾಗಲಿದೆ? (ಪ್ರತಿ ಲೀಟರ್‌ಗೆ)
ಟೋನ್ಡ್ ಹಾಲು – 42 ರೂ.
ಹೋಮೋಜಿನೈಸ್ಡ್‌ ಹಾಲು – 43 ರೂ.
ಹೋಮೋಜಿನೈಸ್ಡ್‌ ಹಸುವಿನ ಹಾಲು – 47 ರೂ.
ಸ್ಪೆಷಲ್‌ ಹಾಲು- 48 ರೂ.
ಶುಭಂ ಹಾಲು- 48 ರೂ.
ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಾಲು- 49 ರೂ.
ಸಮೃದ್ಧಿ ಹಾಲು- 53 ರೂ.
ಸಂತೃಪ್ತಿ ಹಾಲು- 55 ರೂ.
ಡಬಲ್ಡ್‌ ಟೋನ್ಡ್‌ ಹಾಲು- 41 ರೂ.
ಮೊಸರು ಪ್ರತಿ ಲೀಟರ್‌ಗೆ – 50 ರೂ.

Leave a Reply

error: Content is protected !!