ಬಡ್ಡಿಗೆ ಸಾಲ ಪಡೆದು ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬೆಳಗಾವಿಯ ಯುವತಿ ಮೂರು ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಯುವತಿ ಮಂಜುಳಾ ಶಿವಾನಂದ ಗೊರಗುದ್ದಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಜಾವೆಲಿನ್ ಥ್ರೋದಲ್ಲಿ 3ನೇ ಸ್ಥಾನ ಪಡೆದು ಕಂಚಿನ ಪದಕ ಬಾಚಿಕೊಂಡಿದ್ದಾರೆ.
ಜುಲೈ 28ರಿಂದ ಆಗಸ್ಟ್ 4ರ ವರೆಗೆ ಆಯೋಜನೆಗೊಂಡಿದ್ದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ ಮಂಜುಳಾ ಅವರು ಮೂರು ದಿನಗಳಲ್ಲಿ ಪದಕಗಳೊಂದಿಗೆ ತವರಿಗೆ ಮರಳಲಿದ್ದಾರೆ. ಸುಮಾರು 2.5 ಲಕ್ಷ ರೂ. ಹಣ ಹೊಂದಿಸಿ ದೂರದ ಜರ್ಮನಿಗೆ ಹೋಗಿದ್ದ ಮಂಜುಳಾ ಪದಕ ಗೆಲ್ಲುವ ತನ್ನ ಕನಸು-ನನಸು ಮಾಡಿಕೊಳ್ಳುವ ಮೂಲಕ ವಿದೇಶದಲ್ಲೂ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ.
ಈ ಬಗ್ಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಮಂಜುಳಾ, ವಿದೇಶಿ ನೆಲದಲ್ಲಿ ಮೂರು ಪದಕ ಗೆದ್ದಿರುವುದು ತುಂಬಾ ಖುಷಿ ಕೊಟ್ಟಿದೆ. ಈ ಪದಕಗಳನ್ನ ಭಾರತ ದೇಶಕ್ಕೆ ಮತ್ತು ನನ್ನ ತಾಯಿಗೆ ಅರ್ಪಿಸುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸು ನನಗೆ ಬಂದಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾಧಿಸುವ ಛಲವೊಂದಿದ್ದರೆ ಏನೂ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಮಂಜುಳಾ ಉದಾಹರಣೆಯಾಗಿದ್ದಾರೆ.