ಹಿರಿಯ ಎನ್‍ಸಿಸಿ ಕೆಡೆಟ್ ಒಬ್ಬ ತರಬೇತಿ ಕೊಡುವ ನೆಪದಲ್ಲಿ 8 ಮಂದಿ ಜ್ಯೂನಿಯರ್ ಗಳಿಗೆ ಮನಬಂದಂತೆ ಥಳಿಸಿದ ಘಟನೆಯೊಂದು ಥಾಣೆಯ ಬಂಡೋಡ್ಕರ್ ಕಾಲೇಜಿನಲ್ಲಿ ನಡೆದಿದೆ.
ಎನ್‍ಸಿಸಿ ಕೆಡೆಟ್ ಯುವಕರಿಗೆ ಥಳಿಸುತ್ತಿರುವ ವೀಡಿಯೋವನ್ನು ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತರಬೇತಿ ವೇಳೆ ತಾನು ಹೇಳಿ ಕೊಟ್ಟಿದ್ದನ್ನು ಜ್ಯೂನಿಯರ್ ಗಳು ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಇಂತಹ ಶಿಕ್ಷೆ ನೀಡಿದ್ದಾನೆ ಎನ್ನಲಾಗುತ್ತಿದೆ.
ही कसली एनसीसी ट्रेनिंग, ही तर क्रूरता…!
— Bhavana Ghanekar (@BhavanaGhanekar) August 3, 2023
मुख्यमंत्र्यांच्या ठाण्यात NCC कॅडेट्सवर हा असला अन्याय होत असेल तर मुख्यमंत्री साहेब बाकी जनतेनं काय करावं.#ncc #ncccadet #thane #eknathshinde #chiefminister #maharashtra pic.twitter.com/8iWykLRI4V
ವೀಡಿಯೋದಲ್ಲಿ ಏನಿದೆ..?:
ಸೀನಿಯರ್ ಎನ್‍ಸಿಸಿ ಕೆಡೆಟ್ ಒಬ್ಬ ತನ್ನ 8 ಮಂದಿ ಜ್ಯೂನಿಯರ್ ಗಳನ್ನು ಮಳೆ ನೀರಿನ ನಡುವೆ ಪುಷ್ ಅಪ್ ಪೊಸಿಷನ್‍ನಲ್ಲಿ ಇರುವಂತೆ ಹೇಳುತ್ತಾನೆ. ಬಳಿಕ ಅವರ ಮೇಲೆ ದೊಣ್ಣೆಯ ಮುಖಾಂತರ ಮನಬಂದಂತೆ ಹಲ್ಲೆ ನಡೆಸಲು ಶುರು ಮಾಡುತ್ತಾನೆ. ಈ ವೇಳೆ ಅವರು ನೋವಿನಿಂದ ಕಿರುಚಾಡಿದರೂ ಸೀನಿಯರ್ ಬಿಡದೆ ದೈಹಿಕ ಹಿಂಸೆ ನೀಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಲವರು ಘಟನೆಯನ್ನು ಖಂಡಿಸಿದ್ದಾರೆ. ತರಬೇತಿ ಹೆಸರಲ್ಲಿ ಈ ರೀತಿ ಮಾಡುವುದು ಶಿಕ್ಷಾರ್ಹ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಸಂಬಂಧ ಬಂದೋಡ್ಕರ್ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್ ಪ್ರತಿಕ್ರಿಯಿಸಿ, ಇಂತಹ ವರ್ತನೆಯನ್ನು ನಾವು ಹಾಗೂ ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಳೆದ 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿ ಕೊಡಲಾಗುತ್ತಿದ್ದು, ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಎನ್‍ಸಿಸಿ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.