ನೇಸರ ಜ.17: ಕೆಲವು ವಾರದ ಹಿಂದೆಯಷ್ಟೇ ಕಾರಿನ ಮೇಲೆ ಮರಬಿದ್ದು ಚಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಗುಂಡ್ಯ ಸಮೀಪದ ಅಡ್ಡಹೊಳೆಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು. ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಬೈಕ್ ಸವಾರ ಗಾಯಗೊಂಡು ಅದೃಷ್ಟವಶಾತ್ ಅಪಾಯದಿಂದ ಪಾರಾಗಿರುವ ಘಟನೆ ಜ.17ರಂದು ಬೆಳಿಗ್ಗೆ ನಡೆದಿದೆ.
ಕಾಸರಗೋಡು ನಿವಾಸಿ ಪವನ್(26ವ.)ಗಾಯಗೊಂಡವರಾಗಿದ್ದಾರೆ.ಪವನ್ರವರು ಹಾಸನದ ಖಾಸಗಿ ಕಂಪನಿಯೊಂದರಲ್ಲಿ ಮೆನೇಜರ್ ಆಗಿದ್ದು ಜ.17ರಂದು ಬೆಳಿಗ್ಗೆ ಕೆಲಸಕ್ಕೆಂದು ಕಾಸರಗೋಡಿನಿಂದ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಗ್ರಾಮದ ಅಡ್ಡಹೊಳೆ-ಗುಂಡ್ಯ ಮಧ್ಯೆ ದೂಪದ ಮರವೊಂದು ಬೈಕ್ನ ಹಿಂಬದಿ ಭಾಗದ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ಬೈಕ್ ಪಲ್ಟಿಯಾಗಿ ಸುಮಾರು 15 ಮೀಟರ್ನಷ್ಟೂ ದೂರಕ್ಕೆ ಬೈಕ್ ಜಾರಿಗೊಂಡು ಹೋಗಿದ್ದು,ಪವಾನ್ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯರ ನೆರವಿನೊಂದಿಗೆ 108 ಆಂಬುಲೆನ್ಸ್ನಲ್ಲಿ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು ವಿದ್ಯುತ್ ತಂತಿಯೂ ತುಂಡಾಗಿದೆ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.ಗುಂಡ್ಯದಿಂದ ಉಪ್ಪಿನಂಗಡಿಯ ವರೆಗೂ ರಾಷ್ಟ್ರೀಯ ಹೆದ್ದಾರಿ ಯುದ್ದಕ್ಕೂ ದೂಪದ ಮರಗಳು ಒಣಗಿ ನಿಂತಿದ್ದು ಬೀಳುವ ಹಂತದಲ್ಲಿದೆ. ಅರಣ್ಯ ಇಲಾಖೆಯವರು ಇನ್ನಾದರೂ ಹೆದ್ದಾರಿಯುದ್ದಕ್ಕೂ ಒಣಗಿ ನಿಂತಿರುವ ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕೆಂಬ ಗ್ರಾಮಸ್ಥರ ಒತ್ತಾಯ ಕೇಳಿಬಂದಿದೆ.